ಲಿಂಗಸುಗೂರು: ತಾಲೂಕಿನ ಹಲ್ಕಾವಟಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಾಳ ಹಾಗೂ ಉಪನಾಳ ಗ್ರಾಮಗಳಿಗೆ ಗ್ರಾಮೀಣ ಉದ್ಯೋಗ ಯೋಜನೆಯಡಿ ಕಾಮಗಾರಿಗಳನ್ನು ಮಂಜೂರು ಮಾಡುವಲ್ಲಿ ಅಧಿಕಾರಿಗಳು ತಾರತಮ್ಯ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಸಂಘಟನೆಯ ತಾಲೂಕು ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ, ಹಲ್ಕಾವಟಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲ್ಕಾವಟಿಗಿ, ಅಂಕನಾಳ, ಉಪನಾಳ ಮತ್ತು ತೊಂಡಿಹಾಳ ಗ್ರಾಮಗಳಲ್ಲಿ ವಿಕಸಿತ ಭಾರತ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಯೋಜನೆಯಡಿ ಕಾಮಗಾರಿಗಳ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ದೂರಿದರು.
ಲಿಂಗಸುಗೂರು ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ಗ್ರಾಮೀಣ ಜನರು ಉದ್ಯೋಗದ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಕನಾಳ ಮತ್ತು ಉಪನಾಳ ಗ್ರಾಮಗಳಿಗೆ ಉದ್ಯೋಗ ಕಾಮಗಾರಿಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಅಂಕನಾಳ ಹಾಗೂ ಉಪನಾಳ ಗ್ರಾಮಸ್ಥರು ಸೆಪ್ಟೆಂಬರ್ 21, 2026ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದಲ್ಲದೆ, ಹಲವು ಬಾರಿ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ಗ್ರಾಮವನ್ನು ಕಡೆಗಣಿಸದೆ ಸಮಾನವಾಗಿ ಕಾಮಗಾರಿಗಳನ್ನು ಹಂಚಿಕೆ ಮಾಡಬೇಕು. ಅಂಕನಾಳ ಮತ್ತು ಉಪನಾಳ ಗ್ರಾಮಗಳಲ್ಲಿ ಕೂಡಲೇ ಅಗತ್ಯ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾಮಗಾರಿಗಳ ಹಂಚಿಕೆಯಲ್ಲಿ ತಾರತಮ್ಯ ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಕೆಲವೇ ದಿನಗಳಲ್ಲಿ ಅಂಕನಾಳ ಹಾಗೂ ಉಪನಾಳ ಗ್ರಾಮಗಳಿಗೆ ಯೋಜನೆಯಡಿ ಕಾಮಗಾರಿಗಳನ್ನು ಮಂಜೂರು ಮಾಡದಿದ್ದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಎರಡೂ ಗ್ರಾಮಗಳ ಸಾರ್ವಜನಿಕರು ಒಗ್ಗೂಡಿ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ ಗುತ್ತೇದಾರ ಹೊನ್ನಳ್ಳಿ, ಅಶೋಕ ಗಸ್ತಿ, ಯಲ್ಲಪ್ಪ ಬಂಡಿ, ರವಿಕುಮಾರ ಗೋರೆಬಾಳ, ಲಕ್ಷ್ಮಿ ಅಂಕನಾಳ, ಅಮರಮ್ಮ ಅಂಗಡಿ, ಗದ್ದೆಮ್ಮ ತಳವಾರ, ಶರಣಮ್ಮ, ರೇಣುಕಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



