ಕವಿತಾಳ: ಪಟ್ಟಣದ ನಾಡಕಚೇರಿ ಆವರಣದಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು. ಸರ್ಕಾರದ ವಿವಿಧ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಹಶೀಲ್ದಾರ್ ಅಶೋಕ್ ಪವರ್ ಮಾತನಾಡಿ, ಸಿರವಾರ ತಾಲೂಕಿನಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವು ಫಲಾನುಭವಿಗಳಿಗೆ ಮಾಸಾಶನ ತಲುಪದಿರುವ ಕುರಿತು ವಿವರಿಸಿದರು. ರಾಜ್ಯದಲ್ಲಿ ಸುಮಾರು 23 ಲಕ್ಷ ಮಾಸಾಶನಗಳನ್ನು ವಿವಿಧ ಕಾರಣಗಳಿಂದ ತಡೆಹಿಡಿಯಲಾಗಿದ್ದು, ಜಿಎಸ್ಟಿ ಪಾವತಿದಾರರು, ಎಪಿಎಲ್ ಕಾರ್ಡ್ ಹೊಂದಿರುವವರು, ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹಾಗೂ ಅರ್ಹ ವಯಸ್ಸಿನ ಮಾನದಂಡ ಪೂರೈಸದ ಪ್ರಕರಣಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಅರ್ಹ ಫಲಾನುಭವಿಗಳಿಗೆ ಮಾಸಾಶನ ಮರುಪ್ರಾರಂಭಿಸಲು ಕ್ರಮ ನಡೆಯುತ್ತಿದೆ ಎಂದರು.
ಕೃಷಿ ಇಲಾಖೆ ಅಧಿಕಾರಿ ಶಿವಶರಣ ಭೋವಿ ಮಾತನಾಡಿ, ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದ್ದು, ಮುಂದಿನ ಮಳೆಯ ಸಾಧ್ಯತೆಯನ್ನು ಗಮನಿಸಿ ರೈತರು ಕಡಲೆ, ಜೋಳ, ಕುಸುಬೆ ಮತ್ತಿತರ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎಂದರು. ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ರೈತರು ಇ-ಕೆವೈಸಿ ಹಾಗೂ ಫೇಸ್ ಅಥೆಂಟಿಕೇಶನ್ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
‘ನೇಗಿಲ ಯೋಗಿ’ ಯೋಜನೆಯಡಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ಬಳಕೆಗೆ ಸಹಾಯಧನ ನೀಡಲಾಗುತ್ತಿದ್ದು, ಕವಿತಾಳ ಹೋಬಳಿಯಲ್ಲಿ 150 ಟ್ರ್ಯಾಕ್ಟರ್ ಮಾಲೀಕರ ಆರ್ಸಿ ದಾಖಲೆಗಳನ್ನು ಆಪ್ ಮೂಲಕ ಅಪ್ಲೋಡ್ ಮಾಡಿ ಒಪ್ಪಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಸ್ಪಾಲ್ ಸಿಂಗ್ ಇ-ಖಾತಾ ಹಾಗೂ ಬಿ-ಖಾತಾ ಕುರಿತು ಮಾಹಿತಿ ನೀಡಿದರು. ತಾಪಂ ಇಒ ಮಂಜುನಾಥ್ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರೆ, ಸಿಡಿಪಿಒ ವಿರುಪಾಕ್ಷ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗಾಗಿ ಮನೆಮನೆಗೆ ಭೇಟಿ ನೀಡಿ ಆಧಾರ್, ಪಡಿತರ ಚೀಟಿ ಹಾಗೂ ಅಗತ್ಯ ದಾಖಲೆಗಳನ್ನು ಮೊಬೈಲ್ ಆಪ್ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 23 ಅಹವಾಲುಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಗೆ 12, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಪಟ್ಟಣ ಪಂಚಾಯಿತಿ ಹಾಗೂ ಸಾರಿಗೆ ಇಲಾಖೆಗೆ ತಲಾ 2 ಮತ್ತು ತಾಲೂಕು ಪಂಚಾಯಿತಿ, ನೀರಾವರಿ ಇಲಾಖೆ ಹಾಗೂ ಹಿರೇಹಣಗಿ ಗ್ರಾಮ ಪಂಚಾಯಿತಿಗೆ ತಲಾ ಒಂದು ಅರ್ಜಿ ಬಂದಿವೆ.
ಶಿಕ್ಷಣ ಇಲಾಖೆ, ಪಿಆರ್ಡಿ, ಪಿಡಬ್ಲ್ಯೂಡಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಗೈರುಹಾಜರಾಗಿದ್ದಕ್ಕೆ ಕೆಲ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ಜೆಇ ಜಲಾಲ, ಉಪನೋಂದಣಿ ಇಲಾಖೆಯ ಅಧಿಕಾರಿ ಪದ್ಮನಾಭ, ಉಪತಹಶೀಲ್ದಾರ್ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಸದಾಕಲಿ ಅರಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



