ಕವಿತಾಳ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕವಿತಾಳ ಪಟ್ಟಣದ ಶ್ರೀ ವಟಗಲ್ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ 7ನೇ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ಸಂಘದ ಆವರಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ.13ರಷ್ಟು ಲಾಭಾಂಶ ಘೋಷಿಸಲಾಯಿತು. 2025-26ನೇ ಸಾಲಿನಲ್ಲಿ ಸಂಘವು ₹27,28,323.26 ನಿವ್ವಳ ಲಾಭ ಗಳಿಸಿರುವುದಾಗಿ ವಾರ್ಷಿಕ ವರದಿಯಲ್ಲಿ ತಿಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಿವರಾಜಪ್ಪಗೌಡ ಪೊಲೀಸ್ ಪಾಟೀಲ್, ಸಹಕಾರಿ ಸಂಘವು ಕೇವಲ ಆರ್ಥಿಕ ವಹಿವಾಟಿಗೆ ಸೀಮಿತವಾಗದೆ ಸದಸ್ಯರು ಹಾಗೂ ಗ್ರಾಹಕರ ಸಂಕಷ್ಟಗಳಿಗೆ ಸ್ಪಂದಿಸುವ ಸಂಸ್ಥೆಯಾಗಬೇಕು ಎಂದರು. ಸದಸ್ಯರ ವಿಶ್ವಾಸ, ಹಿತಾಸಕ್ತಿ ರಕ್ಷಣೆ ಮತ್ತು ಆರ್ಥಿಕ ನೆರವು ನೀಡುವುದೇ ಸಂಘದ ಪ್ರಮುಖ ಗುರಿಯಾಗಿದೆ. ಎಲ್ಲರ ಸಹಕಾರದಿಂದ ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿಯೂ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬಸವರಾಜ್ ಪಾಟೀಲ್, ಸಹಕಾರಿ ತತ್ವದಡಿ ಸದಸ್ಯರು ಹಾಗೂ ಗ್ರಾಹಕರ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಆಡಳಿತ ಮಂಡಳಿಯು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ್ ಇಲ್ಲೂರ್ ಅವರು 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಮಂಡಿಸಿ, ಸಂಘದ ಆರ್ಥಿಕ ಪ್ರಗತಿ ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವರಾಜಪ್ಪಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ಪ್ರಕಾಶ್ ಇಲ್ಲೂರ್, ನಿರ್ದೇಶಕರಾದ ವೀರಭದ್ರಪ್ಪ ಹಳ್ಳಿ, ಬಸವರಾಜ್ ಪಾಟೀಲ್, ಪಂಪಾಪತಿ ಅಂಗಡಿ, ನಾಗರಾಜ್ ಪಾಟೀಲ್, ತ್ರಿಪುರಾಂತಕ ಅಂಗಡಿ, ಬಾಲರಾಜ್ ನಾಯಕ್, ಅನಿತಾ ಭರತರಾಜ್, ಶಿವಪುತ್ರ ಭೋಗಾವತಿ, ತ್ರಿಶೂಲದರ ನಿಡಿಗಾಳ್, ಪ್ರವೀಣ್ ಕುಮಾರ್ ಹಣಿಗಿ, ಶಿವನಗೌಡ ಪೊಲೀಸ್ ಪಾಟೀಲ್, ಈರಪ್ಪ ಜಡಿಜರ್, ಗಂಗಾಧರ್ ಬಡಿಗೇರ್, ಹನುಮಂತ ಚಲುವಾದಿ, ಸಮರ್ಥ, ಅತಿಥಿಗಳಾದ ರಾಮಮೂರ್ತಿ ಇಲ್ಲೂರ್, ಶರಣಪ್ಪ ವೀರನಗೌಡ್ರು, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲನಗೌಡ ಅಂಗಡಿ ಹಾಗೂ ಸಿಬ್ಬಂದಿಗಳಾದ ದುರುಗಪ್ಪ, ರೆಡ್ಡಪ್ಪ, ಮಹೇಶ್ ಪಾಟೀಲ್, ಬಸವರಾಜ ಕೆಂಜೋಡಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.



