ರಾಯಚೂರು: ಗಡಿನಾಡಿನ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಳಕು ಸಂಸ್ಥೆಯ 127ನೇ ಕಾರ್ಯಕ್ರಮದ ಅಂಗವಾಗಿ ನವೆಂಬರ್ 29ರಂದು ಭಾನುವಾರ ಮಂತ್ರಾಲಯದಲ್ಲಿ ಗಡಿನಾಡು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರವಾದ ಮಂತ್ರಾಲಯದ ಶ್ರೀಮಠದ ಪೂಜ್ಯರ ಅನುಮತಿಯೊಂದಿಗೆ ಶ್ರೀಮಠದ ಆವರಣದಲ್ಲಿರುವ ಗುರುರಾಜಾಂಗಣ ಭವನದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ನೂತನ ಪುಸ್ತಕಗಳ ಲೋಕಾರ್ಪಣೆ, ಸಾಹಿತ್ಯ ಚರ್ಚೆ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಬಹುಭಾಷಾ ಕವಿಗೋಷ್ಠಿಗೆ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ತಮ್ಮ ಕವನಗಳನ್ನು ವಾಚಿಸುವ ಮೂಲಕ ಭಾಷಾ ಸೌಹಾರ್ದತೆ ಮತ್ತು ಸಾಹಿತ್ಯಿಕ ಬಾಂಧವ್ಯವನ್ನು ಬೆಸೆಯಲು ವೇದಿಕೆ ಒದಗಿಸಲಾಗುವುದು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದ್ದಾರೆ.
ಗಡಿಭಾಗದ ಜನರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವುದರೊಂದಿಗೆ ವಿವಿಧ ಭಾಷೆ, ಸಂಸ್ಕೃತಿಗಳ ನಡುವಿನ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಯ ಈ ಸಮ್ಮೇಳನದ್ದಾಗಿದೆ. ಸಾಹಿತ್ಯಾಸಕ್ತರು, ಕವಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಬಯಸುವ ಕವಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಲು ಇಚ್ಛಿಸುವ ಕಲಾವಿದರು ಹಾಗೂ ಪ್ರಶಸ್ತಿಗೆ ಹೆಸರು ನೋಂದಾಯಿಸಿಕೊಳ್ಳಲು ಆಸಕ್ತಿ ಹೊಂದಿರುವ ಸಾಧಕರು ನವೆಂಬರ್ 10ರೊಳಗೆ ತಮ್ಮ ವಿವರಗಳನ್ನು ವಾಟ್ಸ್ಆ್ಯಪ್ ಮೂಲಕ 9035996070 ಸಂಖ್ಯೆಗೆ ಕಳುಹಿಸಬೇಕು ಎಂದು ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



