ಬೆಂಗಳೂರು/ರಾಯಚೂರು, ನ. 5: ರಾಯಚೂರು ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಕುಡಿಯುವ ನೀರಿನ ಅಗತ್ಯಕ್ಕೆ ಮೀಸಲು ಕಾಯ್ದಿರಿಸಿ, ಉಳಿದ ನೀರನ್ನು ನವೆಂಬರ್ 30ರವರೆಗೆ ಕಾಲುವೆಗಳಿಗೆ ಹರಿಸುವ ಮೂಲಕ ರೈತರ ಬೆಳೆಗಳನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆ ಹಾಗೂ ಬೆಳೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸಿರುವ ಸಚಿವರು, ರೈತರ ಹಿತದೃಷ್ಟಿಯಿಂದ ಕಾಲುವೆಗಳಿಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು ಸುಮಾರು 53 ಟಿಎಂಸಿ ನೀರು ಲಭ್ಯವಿದೆ. ಅಕ್ಟೋಬರ್ 15ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ 12ರವರೆಗೆ ವಾರಾಬಂದಿ ಪದ್ಧತಿಯಡಿ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಬೆಳೆಗಳು ಪ್ರಸ್ತುತ ನಿರ್ಣಾಯಕ ಬೆಳವಣಿಗೆಯ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನೀರಿನ ಪೂರೈಕೆ ಸ್ಥಗಿತಗೊಂಡರೆ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗುವ ಆತಂಕವಿದೆ ಎಂದು ಸಚಿವರು ಗಮನ ಸೆಳೆದಿದ್ದಾರೆ.

ಈಗಾಗಲೇ ಮಳೆಯ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿ ಬೆಳೆ ಬೆಳೆದಿರುವ ರೈತರಿಗೆ ಕಟಾವಿನ ಹಂತದಲ್ಲಿ ನೀರಿನ ಅಭಾವ ಎದುರಾದರೆ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಹೀಗಾಗಿ ಲಭ್ಯವಿರುವ ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಬೆಳೆ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವಿವಿಧ ಭಾಗಗಳಲ್ಲಿ ರೈತರು ಕಾಲುವೆಗಳಿಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸುವಂತೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ರಾಯಚೂರು ಸೇರಿದಂತೆ ನೀರಾವರಿ ಅವಲಂಬಿತ ಪ್ರದೇಶಗಳಲ್ಲಿ ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ನೀರಿಗಾಗಿ ಕಾಯುತ್ತಿದ್ದಾರೆ. ರೈತರ ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಕುಡಿಯುವ ನೀರಿನ ಅಗತ್ಯಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಮುಂದಿನ ಬೇಸಿಗೆಯ ನೀರಿನ ಬೇಡಿಕೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಕೃಷಿ ಬೆಳೆಗಳ ಅಗತ್ಯ ಹಾಗೂ ಕುಡಿಯುವ ನೀರಿನ ಭದ್ರತೆಯನ್ನು ಸಮತೋಲನಗೊಳಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬರಗಾಲದ ಸಂದರ್ಭದಲ್ಲಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು. ಕೈಗೆ ಬಂದ ಬೆಳೆ ನೀರಿನ ಕೊರತೆಯಿಂದ ಹಾಳಾಗದಂತೆ ತಡೆಯಲು ನವೆಂಬರ್ 30ರವರೆಗೆ ಕಾಲುವೆಗಳಿಗೆ ನೀರು ಹರಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಡಾ. ಅಜಯ್ ಧರ್ಮಸಿಂಗ್ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ಸುರಪುರ ಶಾಸಕ ವೇಣುಗೋಪಾಲ್ ನಾಯಕ್ ಉಪಸ್ಥಿತರಿದ್ದರು.