ಬೆಂಗಳೂರು, ಅ.31: ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ರಾಜ್ಯ ಸಂಘಟನಾ ಸಮಿತಿಯ ಕಾರ್ಯದರ್ಶಿಯಾಗಿ ರಾಯಚೂರಿನ ಡಿ. ಅಚ್ಯುತ ರೆಡ್ಡಿ ಅವರನ್ನು ನೇಮಕ ಮಾಡಿ ಸಂಘದ ವತಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಿ.ಎನ್. ಲಕ್ಷ್ಮಣ ರೆಡ್ಡಿ ಹಾಗೂ ಸಂಘಟನಾ ರಾಜ್ಯಾಧ್ಯಕ್ಷ ಬಾಬು ರೆಡ್ಡಿ (ಭೈರತಿ) ಅವರು ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಡಿ. ಅಚ್ಯುತ ರೆಡ್ಡಿ ಅವರಿಗೆ ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದರು.

ರಾಯಚೂರು ಜಿಲ್ಲೆಯಲ್ಲಿ ರೆಡ್ಡಿ ಸಮುದಾಯದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಿ. ಅಚ್ಯುತ ರೆಡ್ಡಿ ಅವರ ಸಂಘಟನಾ ಚಟುವಟಿಕೆಗಳನ್ನು ಪರಿಗಣಿಸಿ ರಾಜ್ಯಮಟ್ಟದ ಜವಾಬ್ದಾರಿ ನೀಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅಚ್ಯುತ ರೆಡ್ಡಿ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸುವುದು ಹಾಗೂ ಸಮುದಾಯದ ಸದಸ್ಯರ ನಡುವೆ ಸಮನ್ವಯ ಸಾಧಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಿ.ಎನ್. ಲಕ್ಷ್ಮಣ ರೆಡ್ಡಿ, ಸಂಘಟನಾ ರಾಜ್ಯಾಧ್ಯಕ್ಷ ಬಾಬು ರೆಡ್ಡಿ (ಭೈರತಿ) ಸೇರಿದಂತೆ ನಿರ್ದೇಶಕರು ಹಾಗೂ ಪದಾಧಿಕಾರಿಗಳು ನೂತನ ಕಾರ್ಯದರ್ಶಿ ಡಿ. ಅಚ್ಯುತ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಸಂಘಟನಾ ಕಾರ್ಯಗಳಿಗೆ ಶುಭ ಹಾರೈಸಿದರು.