ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ಸಾಹಿತಿ, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಕನ್ನಡ ಚಲನಚಿತ್ರ ‘ಶುಭಲಾಭ’ದ ಮುಹೂರ್ತ ಸಮಾರಂಭ ನಗರದ ಮುದ್ದಿನಪಾಳ್ಯದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ರಿಯಾ ಕಂಬೈನ್ಸ್ ಲಾಂಛನದಡಿ ಶ್ರೀಮತಿ ಯಮುನಾ ಪ್ರಸಾದ್ ನಿರ್ಮಿಸುತ್ತಿರುವ ಈ ಚಿತ್ರದ ಮೂಲಕ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ತಮ್ಮ ಪುತ್ರ ಉತ್ಸವ್ ಪ್ರಸಾದ್ ಅವರನ್ನು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯಿಸುತ್ತಿರುವುದು ವಿಶೇಷವಾಗಿದೆ.
ವಿಜಯದಶಮಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಯಿತು. ಲವ್ಲಿ ಸ್ಟಾರ್ ಪ್ರೇಮ್ ಅವರು ಆರಂಭ ಫಲಕ ತೋರಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ಎಸ್. ಮಹೇಂದರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರದ ಯಶಸ್ಸಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರೊಂದಿಗೆ ಉತ್ಸವ್ ಪ್ರಸಾದ್ ನಾಯಕ ನಟನಾಗಿ ಮೊದಲ ಬಾರಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಂದೆಯ ನಿರ್ದೇಶನದಲ್ಲಿ ಪುತ್ರ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ‘ಶುಭಲಾಭ’ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.
ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್, ವಿಜಯದಶಮಿಯ ಶುಭ ಸಂದರ್ಭದಲ್ಲಿ ಹೊಸ ಉದ್ಯಮಕ್ಕೆ ಚಾಲನೆ ನೀಡಲಾಗಿದೆ. ‘ಶುಭಲಾಭ’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುವ ಉದ್ದೇಶ ಹೊಂದಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸಲಾಗುವುದು ಎಂದು ತಿಳಿಸಿದರು.
ಚಿತ್ರದ ಚಿತ್ರೀಕರಣವನ್ನು ಉತ್ತರ ಕರ್ನಾಟಕದ ವಿಜಯಪುರ, ಬಾದಾಮಿ, ಬಾಗಲಕೋಟೆ ಹಾಗೂ ಸಿಂದಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಸಲು ಯೋಜಿಸಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಸ್ಥಳೀಯ ಅನುಭವಿ ಕಲಾವಿದರು ಹಾಗೂ ರಂಗಭೂಮಿ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿರಲಿವೆ ಎಂದು ವಿವರಿಸಿದರು.
ಉತ್ತರ ಕರ್ನಾಟಕದ ನೆಲ, ಸಂಸ್ಕೃತಿ ಹಾಗೂ ಅಲ್ಲಿನ ಕಲಾವಿದರ ಪ್ರತಿಭೆಯನ್ನು ಕನ್ನಡ ಚಿತ್ರರಂಗದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಈ ಭಾಗದ ವಿವಿಧ ಸ್ಥಳಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಹೊಸ ಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸಲು ಚಿತ್ರತಂಡ ಮುಂದಾಗಿದೆ.
ಚಿತ್ರಕ್ಕೆ ಉಪ್ಪಿ ಹಾಗೂ ವಿದ್ಯಾ ನಾಗೇಶ್ ಛಾಯಾಗ್ರಹಣ, ವಿಜಯಾನಂದ್ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ, ಸುರೇಶ್ ಅರಸು ಸಂಕಲನ ಹಾಗೂ ಸಾಕ್ಷಿ ಶಿವು ವಿನ್ಯಾಸದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಪ್ರವೀಣ್ ಏಕಾಂತ್ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದು, ಡಾ. ಪ್ರಭು ಗಂಜಿಹಾಳ ಮತ್ತು ಡಾ. ವೀರೇಶ್ ಹಂಡಗಿ ಚಿತ್ರತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಪವನ್ ರಾವ್ ಹಾಗೂ ಚೇತನ್ ಪಡುಕೋಣೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ನಿರ್ದೇಶನದ ಹೊಣೆಯನ್ನು ಡಾ. ವಿ. ನಾಗೇಂದ್ರ ಪ್ರಸಾದ್ ವಹಿಸಿಕೊಂಡಿದ್ದು, ಹರಿಹರನ್ ಬಿ.ಪಿ. ಹಾಗೂ ಸುನಿಲ್ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಹೊಸ ಪ್ರತಿಭೆಗಳೊಂದಿಗೆ ಅನುಭವಿ ಕಲಾವಿದರು ಹಾಗೂ ತಂತ್ರಜ್ಞರ ತಂಡವನ್ನು ಒಳಗೊಂಡಿರುವ ‘ಶುಭಲಾಭ’ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.



