ಬೆಂಗಳೂರು, ಅ.17: ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಮುದ್ರಣ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ–2023 ಹಾಗೂ ಪ್ರೆಸ್ ಸೇವಾ ಪೋರ್ಟಲ್‌ನ ಕಾರ್ಯವಿಧಾನಗಳ ಕುರಿತು ಪತ್ರಿಕಾ ಪ್ರಕಾಶಕರು ಮತ್ತು ಮುದ್ರಕರಿಗೆ ಮಾಹಿತಿ ನೀಡುವ ‘ವಾರ್ತಾ’ ಕಾರ್ಯಾಗಾರ ಶನಿವಾರ ಬೆಂಗಳೂರಿನಲ್ಲಿ ನಡೆಯಿತು.

ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಕಾರ್ಯಾಲಯ (ಪಿಐಬಿ) ಬೆಂಗಳೂರು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಪಿಆರ್‌ಜಿಐ) ಹಾಗೂ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಪತ್ರಿಕೆ ಮತ್ತು ನಿಯತಕಾಲಿಕೆಗಳ ಪ್ರಕಾಶಕರು ಹಾಗೂ ಮುದ್ರಕರು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಪ್ರಧಾನ ಮಹಾನಿರ್ದೇಶಕ ಯೋಗೇಶ್ ಕುಮಾರ್ ಬವೇಜಾ ಅವರು ಮಾತನಾಡಿ, ಮುದ್ರಣ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ–2023ರ ಪ್ರಮುಖ ಅಂಶಗಳು ಹಾಗೂ ಪ್ರೆಸ್ ಸೇವಾ ಪೋರ್ಟಲ್ ಮೂಲಕ ಕೈಗೊಳ್ಳಬಹುದಾದ ವಿವಿಧ ಪ್ರಕ್ರಿಯೆಗಳ ಕುರಿತು ವಿವರಿಸಿದರು.

ಹೊಸ ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ, ಮಾಲೀಕರು ಹಾಗೂ ಪ್ರಕಾಶಕರ ವಿವರಗಳ ದಾಖಲೀಕರಣ, ಮಾಲೀಕತ್ವ ಬದಲಾವಣೆ, ವಾರ್ಷಿಕ ವಿವರಗಳ ಸಲ್ಲಿಕೆ, ನೋಂದಣಿ ರದ್ದತಿ, ಪ್ರಸರಣ ಪರಿಶೀಲನೆ ಹಾಗೂ ಪರಿಷ್ಕೃತ ನೋಂದಣಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾ ಮಾಲೀಕರು ಮತ್ತು ಪ್ರಕಾಶಕರು ಪಾಲಿಸಬೇಕಾದ ನಿಯಮಗಳು, ಕಾನೂನುಬದ್ಧ ಜವಾಬ್ದಾರಿಗಳು ಹಾಗೂ ನೋಂದಣಿ ಸಂಬಂಧಿತ ಪ್ರಕ್ರಿಯೆಗಳ ಕುರಿತು ಸ್ಪಷ್ಟನೆ ನೀಡಿದರು.

ಬಳಿಕ ನಡೆದ ಸಂವಾದದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಕಾಶಕರು ಮತ್ತು ಮುದ್ರಕರು ಪ್ರೆಸ್ ಸೇವಾ ಪೋರ್ಟಲ್ ಬಳಕೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳು, ಮಾಸಿಕ ಪತ್ರಿಕೆಗಳ ಸಲ್ಲಿಕೆ, ಪಿಆರ್‌ಜಿಐ ನಿಯಮಗಳ ಅನುಷ್ಠಾನ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಪ್ರಕಾಶಕರ ಅಹವಾಲುಗಳನ್ನು ಆಲಿಸಿದ ಯೋಗೇಶ್ ಕುಮಾರ್ ಬವೇಜಾ ಅವರು ಸಂಬಂಧಿತ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಸ್ಪಷ್ಟನೆಗಳನ್ನು ನೀಡಿದರು.

ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮವು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪತ್ರಿಕಾ ಮಾಧ್ಯಮಕ್ಕೆ ಸರ್ಕಾರ ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ಪ್ರಕಾಶಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಪತ್ರಕರ್ತರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯವಾಗಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಮೂಲಕ ಪತ್ರಕರ್ತರಿಗೆ ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಾಂಶಗಳ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ. ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಪತ್ರಿಕೋದ್ಯಮದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಸಕಾರಾತ್ಮಕ ಸುದ್ದಿಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹಾಗೂ ಪೊಲೀಸ್ ಉಪ ಮಹಾನಿರೀಕ್ಷಕ ಎಂ.ಎನ್. ಅನುಚೇತ್ ಮಾತನಾಡಿ, ರಾಜ್ಯದಲ್ಲಿ ಹೊಸ ಮಾಧ್ಯಮ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಸಲಹೆ ಮತ್ತು ಸಹಕಾರ ಅತ್ಯಂತ ಅಗತ್ಯವಾಗಿದೆ. ಯೂಟ್ಯೂಬ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳ ವ್ಯಾಪ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಉತ್ತೇಜಿಸಲು ಸೂಕ್ತ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿಯೂ ವೃತ್ತಿಪರ ಜವಾಬ್ದಾರಿ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಪಿಆರ್‌ಜಿಐ ಸೂಕ್ತ ಕ್ರಮಗಳನ್ನು ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದೂರದರ್ಶನ ಸುದ್ದಿ ವಿಭಾಗದ ನಿರ್ದೇಶಕ ಬಿ.ಎ. ಕೇಶವಮೂರ್ತಿ ಸ್ವಾಗತಿಸಿದರು. ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಉಪ ನಿರ್ದೇಶಕ ಗೌರವ್ ಶರ್ಮಾ ಅವರು ಪ್ರೆಸ್ ಸೇವಾ ಪೋರ್ಟಲ್‌ನ ಕಾರ್ಯವಿಧಾನ ಮತ್ತು ತಾಂತ್ರಿಕ ಅಂಶಗಳ ಕುರಿತು ಮಾಹಿತಿ ನೀಡಿದರು.

ಪತ್ರಿಕಾ ಮಾಹಿತಿ ಕಾರ್ಯಾಲಯ ಬೆಂಗಳೂರು, ಕೇಂದ್ರ ಸಂವಹನ ಇಲಾಖೆ, ಆಕಾಶವಾಣಿ ಹಾಗೂ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.