ರಾಯಚೂರು, ಅ.2: ಹಿರಿಯ ಸಾಹಿತಿ ಲಕ್ಷ್ಮಿದೇವಿ ಶಾಸ್ತ್ರಿ ಅವರ ಸಾಹಿತ್ಯ, ಸಂಶೋಧನೆ, ಜನಪದ ಹಾಗೂ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಏಳು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಅ.4ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ವಿಶ್ವನಾಥ ಶಾಸ್ತ್ರಿ ತಿಳಿಸಿದರು.

ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವ ಪ್ರಕಾಶನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ್ ಯತಗಲ್ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದು, ಹಿರಿಯ ಸಾಹಿತ್ಯ ವಿದ್ವಾಂಸ ಶಾಮಸುಂದರ ಬಿದರಕುಂದಿ ಉದ್ಘಾಟಿಸಲಿದ್ದಾರೆ.

‘ತುಂಗಭದ್ರೆಯ ಆಯುರ್ವೇದದಿಂದ ಆರೈಕೆಗೊಂಡ ದೇಶ-ವಿದೇಶಿಯರು’, ‘ರಾಯಚೂರು ಕೋಟೆಗೆ ನರಬಲಿ–ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ’, ‘ರಾಯಚೂರಿನ ಚಿತ್ರಕಲಾ ದಿಗ್ಗಜರು’, ‘ವಚನವಲ್ಲರಿ ಚುಟುಕುಗಳು’, ‘ಲಕ್ಷ್ಮೀದೇವಿ ಶಾಸ್ತ್ರಿಯವರ ಕಂಠದಲ್ಲುಳಿದ ಜನಪದಗಳು’, ‘ಸಂಶೋಧನಾ ಕೃಷಿಕ ದುರ್ಗಾ ಜಗದೀಶ್’ ಹಾಗೂ ‘ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರಮಾಲೆ–ಪಂಡಿತ ತಾರಾನಾಥ’ ಕೃತಿಗಳು ಲೋಕಾರ್ಪಣೆಯಾಗಲಿವೆ.

ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳು, ಸಂಶೋಧಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಪ್ರತಿಭಾ ಗೋನಾಳ್, ದಂಡಪ್ಪ ಬಿರಾದಾರ್, ವೈಶಾಲಿ ಪಾಟೀಲ್, ಲಕ್ಷ್ಮಿದೇವಿ ಶಾಸ್ತ್ರಿ, ತಾಯಪ್ಪ ಹೊಸೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.