ಗಂಗಾವತಿ, ಅ.6: ವಿಲ್ ಮೂಲಕ ಬಂದ ಜಮೀನಿನ ಉತಾರವನ್ನು ಅರ್ಜಿದಾರರ ಹೆಸರಿಗೆ ಮಾಡಿಕೊಡಲು ₹40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಂಗಾಪುರ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ.

ಗಂಗಾವತಿ ತಾಲೂಕಿನ ಅಂಜನಹಳ್ಳಿ ನಿವಾಸಿ ರಾಮು ತಂದೆ ವೆಂಕಟೇಶ ಅವರಿಗೆ ಅವರ ಸಣ್ಣಜ್ಜನಿಂದ ವಿಲ್ ಮೂಲಕ ಜಮೀನು ಬಂದಿತ್ತು. ಈ ಜಮೀನಿನ ಉತಾರವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಅವರು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ರಾಮು ಅ.5ರಂದು ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಅ.6ರಂದು ಮಧ್ಯಾಹ್ನ ಸುಮಾರು 12.40ಕ್ಕೆ ರಾಮು ಅವರಿಂದ ₹40 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನೂ ಹಿಡಿದು ಬಂಧಿಸಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಕಚೇರಿ ತಿಳಿಸಿದೆ.

ರಾಯಚೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸುನೀಲ ಮೇಗಲಮನಿ, ಶೈಲಾ ಎಸ್. ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.