ಗಂಗಾವತಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಆನೆಗೊಂದಿಯಲ್ಲಿ ವಿಜಯದಶಮಿ ಅಂಗವಾಗಿ ಸಾಂಪ್ರದಾಯಿಕ ಜಂಬೂ ಸವಾರಿ ಮಹೋತ್ಸವ ಬುಧವಾರ ವೈಭವದಿಂದ ಜರುಗಿತು. ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ ಅವರು ಮಹೋತ್ಸವದಲ್ಲಿ ಭಾಗವಹಿಸಿ, ಡೊಳ್ಳು ಬಾರಿಸುವ ಮೂಲಕ ಕಲಾ ತಂಡಗಳನ್ನು ಉತ್ತೇಜಿಸಿದರು.
ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ನಂಟು ಹೊಂದಿರುವ ಆನೆಗೊಂದಿಯಲ್ಲಿ ವಿಜಯದಶಮಿ ಆಚರಣೆಗೆ ವಿಶೇಷ ಮಹತ್ವವಿದೆ. ಜಂಬೂ ಸವಾರಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನಗಳ ಮೂಲಕ ಜನರ ಗಮನ ಸೆಳೆದವು. ಪೌರಾಣಿಕ ಪಾತ್ರಗಳ ವೇಷಭೂಷಣ ಧರಿಸಿದ್ದ ಕಲಾವಿದರು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆಯಾದ ಧೋತಿ ಮತ್ತು ಜುಬ್ಬ ಧರಿಸಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ, ಕಲಾವಿದರೊಂದಿಗೆ ಡೊಳ್ಳು ಬಾರಿಸಿ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಗವಿಶ್ರೀಗಳು ತಮ್ಮ ಸಂದೇಶದಲ್ಲಿ ರೈತರ ಹಿತ, ಪರಿಸರ ಸಂರಕ್ಷಣೆ, ಮಾನವೀಯ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ರಾಜ್ಯದ ಜನರ ಒಳಿತಿಗಾಗಿ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿರುವ ಗವಿಶ್ರೀಗಳು, ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ಸಂಕಷ್ಟವನ್ನು ಪ್ರಸ್ತಾಪಿಸಿ ಅನ್ನದಾತರ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ರೈತರು ಬಿಸಿಲು, ಮಳೆ ಎನ್ನದೆ ಶ್ರಮಿಸಿ ಆಹಾರ ಉತ್ಪಾದಿಸುತ್ತಿದ್ದು, ಅವರ ಬದುಕಿಗೆ ಭದ್ರತೆ ಒದಗಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಸ್ವಾಮೀಜಿಯವರ ಸಂದೇಶವನ್ನು ಸ್ಮರಿಸಿದರು.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳಿಗೆ ನಮ್ಮ ಆಚಾರ-ವಿಚಾರ, ಸಂಸ್ಕೃತಿ, ಹಿರಿಯರ ಜೀವನ ಮೌಲ್ಯಗಳು ಹಾಗೂ ಬಸವಣ್ಣನವರ ವಚನಗಳ ಮಹತ್ವವನ್ನು ತಿಳಿಸಿಕೊಡುವುದು ಅಗತ್ಯವಾಗಿದೆ. ಪೋಷಕರು ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಮತ್ತು ಸಂಸ್ಕಾರವನ್ನೂ ಕಲಿಸಬೇಕು ಎಂದು ಗವಿಶ್ರೀಗಳು ನೀಡಿದ ಸಂದೇಶವನ್ನು ಉಲ್ಲೇಖಿಸಿದರು.
ಧರ್ಮವು ಜನರನ್ನು ಜಾತಿಯ ಆಧಾರದಲ್ಲಿ ವಿಭಜಿಸುವುದಕ್ಕಲ್ಲ, ಸಂಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕಾಗಿ ಎಂಬ ಗವಿಶ್ರೀಗಳ ಮಾತು ಸಮಾಜಕ್ಕೆ ಉತ್ತಮ ಮಾರ್ಗದರ್ಶನವಾಗಿದೆ. ಅವರ ಆಶಯದಂತೆ ಎಲ್ಲರೂ ಪರಸ್ಪರ ಸಹಕಾರ ಮತ್ತು ಸಾಮರಸ್ಯದಿಂದ ಬದುಕಬೇಕು ಎಂದು ಅಮರೇಶ್ ಕರಡಿ ಹೇಳಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರು ಮಳೆ ಉತ್ತಮವಾಗಿ ಸುರಿದು ರೈತರ ಜಮೀನುಗಳಲ್ಲಿ ಸಮೃದ್ಧ ಬೆಳೆ ಬರಬೇಕು. ಕೊಪ್ಪಳ ಜಿಲ್ಲೆಯಲ್ಲಿ ಮಳೆ, ಬೆಳೆ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಪರಿಸರ ನಾಶದಿಂದ ಮಳೆ ಪ್ರಮಾಣದ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಜಲ ಮತ್ತು ನೆಲದ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪರಿಸರ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಬದುಕು ಕಲ್ಪಿಸಲು ಸಾಧ್ಯ. ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ ಸಾಲುಮರದ ತಿಮ್ಮಕ್ಕ ಅವರಂತಹ ಸಾಧಕರ ಜೀವನ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಆನೆಗೊಂದಿಯ ಐತಿಹಾಸಿಕ ಮಹತ್ವವನ್ನು ವಿವರಿಸಿದ ಅವರು, ಮೈಸೂರು ದಸರಾ ಆಚರಣೆಯ ಪರಂಪರೆಗೆ ಗಂಗಾವತಿ ತಾಲೂಕಿನ ಆನೆಗೊಂದಿಯೊಂದಿಗೆ ಐತಿಹಾಸಿಕ ನಂಟಿದೆ. ಪ್ರಾಚೀನ ಕಾಲದಿಂದಲೂ ಈ ಭಾಗದಲ್ಲಿ ದುರ್ಗಾಪರಮೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು. ಕುಮ್ಮಟದುರ್ಗದ ಅರಸರ ಕಾಲದ ಧಾರ್ಮಿಕ ಸಂಪ್ರದಾಯವನ್ನು ನಂತರ ಹಕ್ಕ-ಬುಕ್ಕರು ಮುಂದುವರಿಸಿಕೊಂಡು ಬಂದರು ಎಂದು ತಿಳಿಸಿದರು.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಆನೆಗೊಂದಿ ಮತ್ತು ಕುಮ್ಮಟದುರ್ಗದ ಪಾತ್ರ ಮಹತ್ವದ್ದಾಗಿದೆ. ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾಹಿತ್ಯ, ಸಂಗೀತ, ಕಲೆ, ಧರ್ಮ ಮತ್ತು ವೀರಪರಂಪರೆಗೆ ನೀಡಿದ ಕೊಡುಗೆ ವಿಶಿಷ್ಟವಾಗಿದೆ. ಇಂತಹ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜಂಬೂ ಸವಾರಿ ಮಹೋತ್ಸವದ ಸಂದರ್ಭದಲ್ಲಿ ಅಮರೇಶ್ ಕರಡಿ ಅವರು ಆನೆಗೊಂದಿಯ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಶ್ರೀಕೃಷ್ಣದೇವರಾಯ, ಹರಿಹರ ದೇವರಾಯಲು ಹಾಗೂ ಬುಕ್ಕದೇವರಾಯಲು ಸೇರಿದಂತೆ ರಾಜಮನೆತನದ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದರು.
ಮಹೋತ್ಸವದಲ್ಲಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಶ್ರೀಕೃಷ್ಣದೇವರಾಯ, ಹರಿಹರ ದೇವರಾಯಲು, ಬುಕ್ಕರಾಯಲು, ಗುತ್ತಿಗೆದಾರ ಹರಿಬಾಬು, ಸಣಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಘುವರ್ಮ, ಕುಪ್ಪರಾಜ, ಅಜೇಯ ರಾಜು, ಗಂಗಾವತಿಯ ಮುಖಂಡರಾದ ಶ್ರವಣಕುಮಾರ್ ರಾಯ್ಕರ್, ಚಂದ್ರಪ್ರಸಾದ್ ಜೈನ್, ಗವಿಯಪ್ಪ ಕುರಿ, ಭರಮಪ್ಪ ಲಿಂಗದಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆನೆಗೊಂದಿಯ ಜಂಬೂ ಸವಾರಿ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಬಾರಿ ಬರಗಾಲದ ಪರಿಸ್ಥಿತಿ ಇರುವುದರಿಂದ ಉತ್ತಮ ಹಿಂಗಾರು ಮಳೆಯಾಗಿ ರೈತರ ಬದುಕು ಹಸನಾಗಲಿ. ಕೊಪ್ಪಳ ಜಿಲ್ಲೆಯಲ್ಲಿ ಮಳೆ, ಬೆಳೆ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ ಆಶಯ ವ್ಯಕ್ತಪಡಿಸಿದರು.


