ರಾಯಚೂರು, ನ.1: ಕ್ರೀಡೆಗಳು ಕೇವಲ ಗೆಲುವು ಮತ್ತು ಸೋಲಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸಿರುತ್ತದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ (ಎಲ್ವಿಡಿ) ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 29ರಿಂದ 31ರವರೆಗೆ ಆಯೋಜಿಸಿದ್ದ 2026–27ನೇ ಸಾಲಿನ ನಾಲ್ಕನೇ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಪರಿಶ್ರಮದ ಮನೋಭಾವ ಬೆಳೆಸುತ್ತವೆ. ಆರೋಗ್ಯಕರ ಜೀವನಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗಳಿಗೂ ಸಮಾನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪಾರಸಮಲ್ ಸುಖಾಣಿ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಎಲ್ವಿಡಿ ಮಹಾವಿದ್ಯಾಲಯದ ಕ್ರೀಡಾಪಟುಗಳಾದ ಅನಿಲ್, ರೇಣುಕಾ ಹಾಗೂ ಅಮೋಘವರ್ಷ ಕ್ರೀಡಾಜ್ಯೋತಿಯೊಂದಿಗೆ ಮೈದಾನ ಪ್ರವೇಶಿಸಿದರು. ಗಣ್ಯರು ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಹಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಚನ್ನಪ್ಪ ಮಾತನಾಡಿ, ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ಕ್ರೀಡಾ ಮನೋಭಾವ ಮುಖ್ಯವಾಗಿದೆ. ಸೋಲು ಯಶಸ್ಸಿನ ಮೊದಲ ಹೆಜ್ಜೆಯಾಗಿದ್ದು, ಕ್ರೀಡಾಪಟುಗಳು ಸೋಲಿನಿಂದ ನಿರಾಶರಾಗದೆ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಕಾಲೇಜುಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಬಳಿಕ ಕ್ರೀಡಾಕೂಟವನ್ನು ಅಧಿಕೃತವಾಗಿ ಘೋಷಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪವನಕುಮಾರ ಸುಖಾಣಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದ ದೈಹಿಕ ಶಿಕ್ಷಣ ನಿರ್ದೇಶಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.
ಮೂರು ದಿನಗಳ ಕ್ರೀಡಾಕೂಟದಲ್ಲಿ 25ಕ್ಕೂ ಹೆಚ್ಚು ಕಾಲೇಜುಗಳಿಂದ 420ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಯಚೂರಿನ ವಿಆರ್ಇಟಿ ಕಾಲೇಜಿನ ಭೀಮಾಶಂಕರ ಪ್ರಥಮ ಸ್ಥಾನ ಪಡೆದರೆ, ಸಿಂಧನೂರಿನ ಆಕ್ಸ್ಫರ್ಡ್ ಕಾಲೇಜಿನ ಸಂಗಮೇಶ ದ್ವಿತೀಯ, ರಾಯಚೂರಿನ ಸನ್ರೈಸ್ ಕಾಲೇಜಿನ ವಿನೋದಕುಮಾರ ತೃತೀಯ ಹಾಗೂ ಸಿಂಧನೂರಿನ ನ್ಯಾಷನಲ್ ಕಾಲೇಜಿನ ಛತ್ರಪ್ಪ ಯಾದವ್ ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಲಿಂಗಸೂಗೂರಿನ ಶ್ರೀ ಮಹಾಂತಮ್ಮ ಲಿಂಗನಗೌಡ ಬಯ್ಯಾಪುರ ಕಾಲೇಜಿನ ಶೋಭಾ ಪ್ರಥಮ ಸ್ಥಾನ ಗಳಿಸಿದರು. ರಾಯಚೂರಿನ ನವಯುಗ ಕಾಲೇಜಿನ ರಂಗವೇಣಿ ದ್ವಿತೀಯ, ವಿಆರ್ಇಟಿ ಕಾಲೇಜಿನ ಭವಾನಿ ತೃತೀಯ ಹಾಗೂ ಲಿಂಗಸೂಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಗರತ್ನ ನಾಲ್ಕನೇ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವೆ (ಮೌಲ್ಯಮಾಪನ) ಪ್ರೊ. ಜ್ಯೋತಿ ಧಮ್ಮಪ್ರಕಾಶ್, ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಾರ್ವತಿ ಸಿ.ಎಸ್., ಹಣಕಾಸು ಅಧಿಕಾರಿ ಡಾ. ಸುಯಮೀಂದ್ರ ಕುಲಕರ್ಣಿ, ಕಲಾ ನಿಕಾಯದ ಡೀನ್ ಡಾ. ಲತಾ ಎಂ.ಎಸ್., ಡಾ. ಜಿ.ಎಸ್. ಬಿರಾದಾರ, ಡಾ. ಕೆ. ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ವಸಂತರಾಜ್, ಸಂಯೋಜಕ ಮಲ್ಲಿಕಾರ್ಜುನ ಎನ್., ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರ ಹನುಮಾನ, ಸದಸ್ಯರಾದ ರುದ್ರಪ್ಪ ಅಂಗಡಿ, ಮೃತ್ಯುಂಜಯ ದ್ಯಾಸನೂರು, ಉಪಪ್ರಾಂಶುಪಾಲರಾದ ಡಾ. ಅಂಜನೇಯ ಓಬಳೇಶ, ಡಾ. ಚಕ್ರಧರ ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಶರಣಗೌಡ ಬಿ.ಎಚ್. ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಅರುಣಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಂಪತ್ ಅಂಗಡಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ವಿನಾಯಕ ರಾವ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಹಣಮಂತ್ರಾಯ ನಾಯ್ಕ ಪುಷ್ಪಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹುಸೇನಪ್ಪ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ವಿಜಯಕುಮಾರ ಮಟಮಾರಿ ವಂದಿಸಿದರು.
ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಉಪನ್ಯಾಸಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



