ರಾಯಚೂರು, ಅ.31 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸೋಮಲಿಂಗ ಗೋಪಾಲ ಗೆಣ್ಣೂರ ಅವರು ಅಕ್ಟೋಬರ್ 30ರಂದು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ವರ್ಗಾವಣೆ ಆದೇಶದನ್ವಯ, ಈ ಹಿಂದೆ ರಾಯಚೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಶಿವಪ್ಪ ಯಲ್ಲಪ್ಪ ಭಜಂತ್ರಿ ಅವರನ್ನು ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಸೋಮಲಿಂಗ ಗೋಪಾಲ ಗೆಣ್ಣೂರ ಅವರನ್ನು ನೇಮಕ ಮಾಡಲಾಗಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.

1999ನೇ ಸಾಲಿನ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಬ್ಯಾಚ್‌ನ ಅಧಿಕಾರಿಯಾಗಿರುವ ಸೋಮಲಿಂಗ ಗೋಪಾಲ ಗೆಣ್ಣೂರ ಅವರು ವಿವಿಧ ಜಿಲ್ಲೆಗಳಲ್ಲಿ ಹಲವು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಅವರು, ನಂತರ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಯಚೂರು ಜಿಲ್ಲೆಯ ಮಾನ್ವಿ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

2013ರಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿ ಹಾಗೂ 2014ರಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2019ರಲ್ಲಿ ಚಿಕ್ಕೋಡಿ ಮತ್ತು 2020ರಲ್ಲಿ ವಿಜಯಪುರದಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

2021ರಿಂದ 2023ರವರೆಗೆ ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, 2024ರಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ನಂತರ ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾಗಿ, ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದ ಜಮಖಂಡಿಯ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದವರಾದ ಸೋಮಲಿಂಗ ಗೋಪಾಲ ಗೆಣ್ಣೂರ ಅವರು ಕಂದಾಯ, ಆಹಾರ, ಭೂಸ್ವಾಧೀನ, ನಗರಾಭಿವೃದ್ಧಿ ಹಾಗೂ ವಿಶ್ವವಿದ್ಯಾಲಯ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿಯಾಗಿದ್ದಾರೆ.

ರಾಜ್ಯ ಸರ್ಕಾರದ ಆದೇಶದಂತೆ ಇದೀಗ ರಾಯಚೂರು ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.