ರಾಯಚೂರು, ಅ.31: ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಉಪನ್ಯಾಸಕ ಗೋವರ್ಧನ್ ರೆಡ್ಡಿ ಕರೆ ನೀಡಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಅಡಿಯಲ್ಲಿ ಬಹೇರೂನ್ಖಿಲ್ಲಾ ಪ್ರದೇಶದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕತೆ, ಶಿಸ್ತು, ಸಹಾನುಭೂತಿ, ಪರಸ್ಪರ ಗೌರವ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ನೈತಿಕ ಮೌಲ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾಯಕತ್ವವೆಂದರೆ ಕೇವಲ ಇತರರನ್ನು ಮುನ್ನಡೆಸುವುದಲ್ಲ. ಬದಲಾಗಿ ಸಮಾಜದ ಹಿತದೃಷ್ಟಿಯಿಂದ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳುವುದು, ಇತರರಿಗೆ ಮಾದರಿಯಾಗುವುದು ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ಗುಣಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರವೀಂದ್ರ ಎಸ್. ಬಂಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಮಹತ್ವದ ಕುರಿತು ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಯುವಜನರು ದುಶ್ಚಟಗಳಿಂದ ದೂರವಿದ್ದು, ಶಿಸ್ತು, ಸಂಯಮ ಹಾಗೂ ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಮಹಿಬೂಬ್ ಸಾಬ್ ಮಾತನಾಡಿ, ಉತ್ತಮ ಮೌಲ್ಯಗಳಿಂದಲೇ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಶಿಬಿರಾರ್ಥಿಗಳು ಇಲ್ಲಿ ಕಲಿತ ಮೌಲ್ಯಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದ ಅಂಗವಾಗಿ ಬೆಳಗಿನ ಅವಧಿಯಲ್ಲಿ ಯೋಗ ಗುರು ವೀರರೆಡ್ಡಿ ಅವರು ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಹೇಮಂತ್ ರೆಡ್ಡಿ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಕಾರ್ತಿಕ್ ಪ್ರಾರ್ಥಿಸಿದರು. ಶ್ರೀಕಾಂತ್ ಮತ್ತು ವಿವೇಕ ನೇತೃತ್ವದ ತಂಡ ಎನ್ಎಸ್ಎಸ್ ಗೀತೆ ಪ್ರಸ್ತುತಪಡಿಸಿತು. ಬಂದೇನವಾಜ್ ವಂದಿಸಿದರು.



