ರಾಯಚೂರು, ಅ.31: ನಗರದ ಬೇರೂನಕಿಲ್ಲ ಬಡಾವಣೆಯ ವಾರ್ಡ್ ನಂ. 09ರ ವ್ಯಾಪ್ತಿಯ ಪ್ರಮುಖ ರಸ್ತೆಗಳು ದುಸ್ಥಿತಿಗೆ ತಲುಪಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಯುವ ಹೋರಾಟಗಾರ ಹಾಗೂ ಸಮಾಜಸೇವಕ ರವಿಚಂದ್ರ ಅಲಿಯಾಸ್ ಆಟೋರವಿ ಆಗ್ರಹಿಸಿದ್ದಾರೆ.

ಬಡಾವಣೆಯ ಮಾರೆಪ್ಪ ಅಂಗಡಿ ವೃತ್ತ ಹಾಗೂ ಮಹಾವೀರ ಅವರ ನಿವಾಸದ ಸಮೀಪದ ಜನನಿಬಿಡ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಅಲ್ಲಲ್ಲಿ ಉಂಟಾಗಿರುವ ಗುಂಡಿಗಳು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಈಗಾಗಲೇ ಮಕ್ಕಳು ಸೇರಿದಂತೆ ಮೂರು ನಾಲ್ಕು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇರೂನಕಿಲ್ಲ ಬಡಾವಣೆಯ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ನವೆಂಬರ್ 8ರಂದು ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಥ ಸಾಗುವ ಮಾರ್ಗ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟಿರುವುದು ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ. ಹೆಚ್ಚಿನ ಜನಸಂದಣಿ ಸೇರುವ ಸಂದರ್ಭದಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡ ಗುತ್ತಿಗೆದಾರರು ಕೆಲಸವನ್ನು ಪೂರ್ಣಗೊಳಿಸದೆ ಮಧ್ಯದಲ್ಲೇ ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಕಾಮಗಾರಿಯ ಗುಣಮಟ್ಟ ಹಾಗೂ ವಿಳಂಬದ ಬಗ್ಗೆ ಪರಿಶೀಲನೆ ನಡೆಸಬೇಕಾದ ಪಾಲಿಕೆ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ. ಜನರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಆಡಳಿತ ವ್ಯವಸ್ಥೆ ಇಂತಹ ಗಂಭೀರ ಸಮಸ್ಯೆಯನ್ನು ಕಡೆಗಣಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸ್ಥಿತಿಗತಿ ಪರಿಶೀಲಿಸಬೇಕು. ರಥೋತ್ಸವ ಆರಂಭವಾಗುವ ಮುನ್ನವೇ ಹಾಳಾದ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿಪಡಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮುಂದಿನ ದಿನಗಳಲ್ಲಿ ಯಾವುದೇ ಅಪಘಾತ ಅಥವಾ ಪ್ರಾಣಹಾನಿ ಸಂಭವಿಸಿದರೆ ಅದರ ನೇರ ಹೊಣೆಗಾರಿಕೆಯನ್ನು ಮಹಾನಗರ ಪಾಲಿಕೆ ಆಡಳಿತ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರೇ ಹೊರಬೇಕಾಗುತ್ತದೆ ಎಂದು ರವಿಚಂದ್ರ ಎಚ್ಚರಿಸಿದ್ದಾರೆ.

ನಿಗದಿತ ಅವಧಿಯಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಬೇರೂನಕಿಲ್ಲ ಬಡಾವಣೆಯ ಸಾರ್ವಜನಿಕರನ್ನು ಒಗ್ಗೂಡಿಸಿ ಮಹಾನಗರ ಪಾಲಿಕೆ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ರವಿಚಂದ್ರ ಅಲಿಯಾಸ್ ಆಟೋರವಿ ತಿಳಿಸಿದ್ದಾರೆ.