ರಾಯಚೂರು, ಅ.31: ತಾಲೂಕಿನ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬೇರು ಓಣಿಯಲ್ಲಿ ಆರು ಮನೆಗಳ ಸಾರ್ವಜನಿಕ ಬಳಕೆಗೆ ಕುಡಿಯುವ ನೀರಿನ ನಳ ಅಳವಡಿಸುವುದು ಹಾಗೂ ಚರಂಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ವತಿಯಿಂದ ಕೃಷ್ಣ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮರುಜ್ಞಾಪನಾ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಅಕ್ಟೋಬರ್ 13ರಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದಿರುವುದು ಹಾಗೂ ಚರಂಡಿ ಸ್ವಚ್ಛಗೊಳಿಸದಿರುವುದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಬ್ಬೇರು ಓಣಿಯ ಕೋರ್ ಸೂಗಪ್ಪ, ತಂಗಡಿ ಪಾರ್ತಮ್ಮ, ಸಣ್ಣ ಸೂಗಪ್ಪ, ಬಾಗಿಲು ಸೂಗಪ್ಪ, ತಿಮ್ಮಣ್ಣ ಹಾಗೂ ದೇವೇಂದ್ರಪ್ಪ ಪರ್ನಾಕಿ ಅವರ ಮನೆಗಳ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ಒಂದು ಸಾರ್ವಜನಿಕ ಕುಡಿಯುವ ನೀರಿನ ನಳ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಓಣಿಯ ಚರಂಡಿಯಲ್ಲಿ ಕಸ, ಮಣ್ಣು ಹಾಗೂ ಕೊಳಚೆ ನೀರು ಸಂಗ್ರಹವಾಗಿದ್ದು, ಅಸ್ವಚ್ಛ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಕೂಡಲೇ ಚರಂಡಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಅಗತ್ಯವಿರುವ ಕಡೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಯ ಮೇಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಕಾಮಗಾರಿಗಳಿಗೆ ಲಭ್ಯವಿರುವ ಅನುದಾನ ಹಾಗೂ ಕೈಗೊಳ್ಳಲಿರುವ ಕ್ರಮಗಳ ವಿವರವನ್ನು ಲಿಖಿತವಾಗಿ ನೀಡಬೇಕು. ಕಾಮಗಾರಿಗಳು ಪಂಚಾಯಿತಿ ವ್ಯಾಪ್ತಿಗೆ ಬಾರದಿದ್ದರೆ ಸಂಬಂಧಪಟ್ಟ ಇಲಾಖೆಗೆ ಮನವಿ ರವಾನಿಸಬೇಕು. ಮರುಜ್ಞಾಪನಾ ಪತ್ರ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ಕೃಷ್ಣ ಅವರು ಒತ್ತಾಯಿಸಿದ್ದಾರೆ.