ರಾಯಚೂರು: ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 25ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಯಚೂರು ತಾಲೂಕಿನ ದೇವಸುಗೂರಿನ ಸೂಗೂರೇಶ್ವರ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ವಿಭಾಗಗಳಲ್ಲಿ ಪದಕ ಹಾಗೂ ಟ್ರೋಫಿಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದ ಕರಾಟೆ ಪಂದ್ಯಾವಳಿಯಲ್ಲಿ ದೇವಸುಗೂರಿನ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿ ಒಟ್ಟು 22 ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಕಟಾ ವಿಭಾಗದಲ್ಲಿ ಐದು ಪ್ರಥಮ ಸ್ಥಾನ, ಎರಡು ದ್ವಿತೀಯ ಸ್ಥಾನ ಹಾಗೂ ನಾಲ್ಕು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕುಮಿಟೆ ವಿಭಾಗದಲ್ಲಿ ಮೂರು ಪ್ರಥಮ ಸ್ಥಾನ, ಆರು ದ್ವಿತೀಯ ಸ್ಥಾನ ಹಾಗೂ ಎರಡು ತೃತೀಯ ಸ್ಥಾನಗಳನ್ನು ಗಳಿಸಿ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
14 ವರ್ಷದೊಳಗಿನ ಹಾಗೂ 17 ವರ್ಷ ಮೇಲ್ಪಟ್ಟ ವಯೋಮಾನದ ವಿಭಾಗಗಳಲ್ಲಿ ಭಾಗವಹಿಸಿದ್ದ ಸಂಸ್ಥೆಯ ವಿದ್ಯಾರ್ಥಿಗಳಾದ ಯುಕ್ತ ಪ್ರಸಾದ್, ಮೇಘನಾ, ಮಧುಶ್ರೀ, ಸಹನಾ, ಧನ್ಯ, ಎನ್. ರಿಷಿತ್, ಸುದರ್ಶನ್ ಬಿ., ವೇದಾಂತ್ ಆದ್ರಿ, ರವಿಕುಮಾರ್, ಮೋಕ್ಷಿತ್ ಚೌದರಿ ಹಾಗೂ ವಿನಯ್ ಕುಮಾರ್ ಅವರು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿರುವುದು ದೇವಸುಗೂರು ಹಾಗೂ ರಾಯಚೂರು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಶಿಸ್ತು, ಪರಿಶ್ರಮ ಹಾಗೂ ತರಬೇತುದಾರರ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ತರಬೇತುದಾರ ಪಿ.ಎಸ್. ಶಿವಕುಮಾರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಅಪಾರ ಕ್ರೀಡಾ ಪ್ರತಿಭೆಯಿದ್ದು, ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ದೇವಸುಗೂರಿನಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಕರಾಟೆಯಂತಹ ಆತ್ಮರಕ್ಷಣಾ ಕ್ರೀಡೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕರಾಟೆ ಬುಡಕನ್ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕದ ಉಪಾಧ್ಯಕ್ಷರೂ ಆಗಿರುವ ಪಿ.ಎಸ್. ಶಿವಕುಮಾರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಹ ತರಬೇತುದಾರ ಸುರೇಶ್ ಮತ್ತು ಉಪಾಧ್ಯಕ್ಷ ಹಾಗೂ ಸಹ ತರಬೇತುದಾರ ಸುಮಂತ್ ಎಸ್.ಜಿ. ಅವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ಕ್ರೀಡಾ ಭವಿಷ್ಯಕ್ಕೆ ಶುಭ ಹಾರೈಸಿದರು.



