ರಾಯಚೂರು: ಸರ್ಕಾರಿ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆಗಳು, ಪ್ರೌಢಶಾಲೆಗಳು, ವಸತಿ ಶಾಲೆಗಳು, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ವತಿಯಿಂದ ಅಕ್ಟೋಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಭಾಗಗಳ ಗ್ರಂಥಾಲಯ ಸಂಘದ ಪದಾಧಿಕಾರಿಗಳು, ವೃತ್ತಿನಿರತ ಗ್ರಂಥಪಾಲಕರು ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಹೋರಾಟವು ಕೇವಲ ಗ್ರಂಥಪಾಲಕರ ಉದ್ಯೋಗ ಅಥವಾ ವೃತ್ತಿಪರ ಹಿತಾಸಕ್ತಿಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು, ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ಹಾಗೂ ಗ್ರಂಥಾಲಯಗಳನ್ನು ಬಲಪಡಿಸುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಜ್ಞಾನದ ಅವಕಾಶ ದೊರೆಯುವಂತೆ ಮಾಡುವುದು ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಸಂಘ ತಿಳಿಸಿದೆ.
ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಕೊಠಡಿಯಲ್ಲ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ, ಜ್ಞಾನ ವಿಸ್ತರಿಸುವ, ಪ್ರಶ್ನಿಸುವ ಮನೋಭಾವ ಮೂಡಿಸುವ ಹಾಗೂ ಸ್ವತಂತ್ರವಾಗಿ ಜ್ಞಾನವನ್ನು ಹುಡುಕುವ ಸಾಮರ್ಥ್ಯವನ್ನು ಬೆಳೆಸುವ ಜ್ಞಾನಮಂದಿರವಾಗಿದೆ. ಉತ್ತಮ ಗ್ರಂಥಾಲಯದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಚೆಗಿನ ಜಗತ್ತನ್ನು ಅರಿಯುವ ಅವಕಾಶ ದೊರೆಯುತ್ತದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಪುಸ್ತಕ ಓದುವಿಕೆಯಿಂದ ಏಕಾಗ್ರತೆ, ಆಲೋಚನಾ ಶಕ್ತಿ ಹಾಗೂ ಸಮಯದ ಸದ್ಬಳಕೆಯಂತಹ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸಮರ್ಥ ಗ್ರಂಥಪಾಲಕರಿಲ್ಲದೆ ಗ್ರಂಥಾಲಯದ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
“ಗ್ರಂಥಪಾಲಕರಿಲ್ಲದ ಗ್ರಂಥಾಲಯವು ಗುರು ಇಲ್ಲದ ಗುರುಕುಲದಂತಾಗುತ್ತದೆ” ಎಂಬ ಸಂದೇಶದೊಂದಿಗೆ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಸರ್ಕಾರ ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಅಕ್ಟೋಬರ್ 5ರಂದು ನಡೆಯಲಿರುವ ಹೋರಾಟಕ್ಕೆ ಕನ್ನಡ ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ಓದುಗರು, ಗ್ರಂಥಾಲಯ ಮತ್ತು ಪುಸ್ತಕ ಪ್ರೇಮಿಗಳು ಬೆಂಬಲ ಸೂಚಿಸಬೇಕು. ಗ್ರಂಥಾಲಯಗಳನ್ನು ಬಲಪಡಿಸುವ ಹಾಗೂ ಗ್ರಂಥಪಾಲಕರ ನೇಮಕಾತಿಗಾಗಿ ನಡೆಯುತ್ತಿರುವ ಅಭಿಯಾನಕ್ಕೆ ಧ್ವನಿಗೂಡಿಸಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ಮನವಿ ಮಾಡಿದೆ.



