ಸಿರವಾರ: ಚಿಕ್ಕ ಹಾಗೂ ಮಧ್ಯಮ ವ್ಯಾಪಾರಸ್ಥರಿಗೆ ಕಳೆದ 19 ವರ್ಷಗಳಿಂದ ಸಾಲ ಸೌಲಭ್ಯ ಒದಗಿಸುತ್ತಿರುವ ಸಿರವಾರ ಪತ್ತಿನ ಸಹಕಾರ ಸಂಘ ನಿಯಮಿತವು ಪ್ರಸಕ್ತ ಸಾಲಿನಲ್ಲಿ ₹64,92,719 ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ.19ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ಚುಕ್ಕಿ ಹೇಳಿದರು.
ಪಟ್ಟಣದ ನವಸುಂದಿ ಕಾಂಪ್ಲೆಕ್ಸ್ನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ 19ನೇ ವಾರ್ಷಿಕ ಮಹಾಸಭೆಯನ್ನು ಶ್ರೀ ಬಸವೇಶ್ವರ, ಸಹಕಾರಿ ಸಂಸ್ಥಾಪಕ ಕಣಿಗಿಹಾಳ ಸಿದ್ದನಗೌಡ ಹಾಗೂ ಸಂಸ್ಥಾಪಕ ಆರ್.ಕೆ. ಚನ್ನಬಸವ ಸಾಹುಕಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆರ್.ಕೆ. ಚನ್ನಪ್ಪ ಅವರಿಂದ ಆರಂಭವಾದ ಈ ಸಹಕಾರಿ ಸಂಸ್ಥೆ 19 ವರ್ಷಗಳ ಪಯಣ ಪೂರೈಸಿದ್ದು, ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ನಿರಂತರವಾಗಿ ಬೆಳವಣಿಗೆ ಸಾಧಿಸಿದೆ. ಸಾಲ ಪಡೆದವರು ಹಾಗೂ ಜಾಮೀನುದಾರರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರಿಂದ ಸಹಕಾರಿಗೆ ಮತ್ತಷ್ಟು ಜನರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಸಿಬ್ಬಂದಿ ವರ್ಗವೂ ಉತ್ತಮವಾಗಿ ಕಾರ್ಯನಿರ್ವಹಿಸಿರುವುದರಿಂದ ಈ ಬಾರಿ ₹64.92 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಯ ಲಾಭದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಆರ್ಥಿಕ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ತುಂಗಭದ್ರಾ ಉಳಿಸಿ ಅಭಿಯಾನಕ್ಕೆ ಸಹಾಯ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಎಸಿ ಶವಪೆಟ್ಟಿಗೆಯನ್ನು ದೇಣಿಗೆಯಾಗಿ ನೀಡುವ ಉದ್ದೇಶವಿದೆ ಎಂದು ಹೇಳಿದರು.
ರಾಯಚೂರು ನಗರದ ಗಂಜ್ ಸರ್ಕಲ್ ಹಾಗೂ ಶಕ್ತಿನಗರದಲ್ಲಿ ಎರಡು ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆ ಇದೆ. ಇದರಿಂದ ಸ್ಥಳೀಯರಿಗೆ ಆರ್ಥಿಕ ಸೇವೆ ದೊರೆಯುವುದರ ಜೊತೆಗೆ ಕೆಲವರಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ ಎಂದು ಶಿವಾನಂದ ಚುಕ್ಕಿ ತಿಳಿಸಿದರು.
“ಬ್ಯಾಂಕಿನ ಬಗ್ಗೆ ಹರಡುವ ಊಹಾಪೋಹಗಳಿಗೆ ಜನರು ಕಿವಿಗೊಡಬಾರದು. ಸದಸ್ಯರ ಷೇರು ಹಾಗೂ ಠೇವಣಿಗಳಿಗೆ ನಾವು ಜವಾಬ್ದಾರರಾಗಿದ್ದೇವೆ. ಇದುವರೆಗೆ ನೀಡಿದ ಸಹಕಾರವನ್ನು ಮುಂದೆಯೂ ನೀಡಬೇಕು” ಎಂದು ಮನವಿ ಮಾಡಿದರು.
ಗ್ರಾಹಕ ನಿಂಬಯ್ಯಸ್ವಾಮಿ ಮಾತನಾಡಿ, ಪಟ್ಟಣದಲ್ಲಿರುವ ಎಲ್ಲಾ ಸಹಕಾರಿ ಸಂಘಗಳು ಒಟ್ಟಾಗಿ ಸಾರ್ವಜನಿಕ ಉಪಯೋಗಕ್ಕಾಗಿ ಶವಸಂಸ್ಕಾರ ವಾಹನವನ್ನು ದೇಣಿಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕರಾದ ಅಮರೇಶ ಜೆ. ಹಾಗೂ ಶಿವಕುಮಾರ ಚುಕ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಎಂ. ಶ್ರೀನಿವಾಸ, ಶೋಭಾ ಬ್ರೀಜೇಶ ಪಾಟೀಲ್, ಬಸವರಾಜ ದಳಪತಿ, ಮಲ್ಲಿಕಾರ್ಜುನ ಹೂಗಾರ, ದೇವಿಪುತ್ರಪ್ಪ, ಬಸ್ಸಮ್ಮ ಟಿ. (ಸಂತೋಷ ಟಿ.), ಸಿಇಒ ವಿಶ್ವನಾಥ ನಂದರೇಡ್ಡಿ, ಶಿವರಾಜಪ್ಪ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಶಿವರಾಜಪ್ಪ ವಾರ್ಷಿಕ ವರದಿ ವಾಚಿಸಿದರು.



