ರಾಯಚೂರು: ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಸಾಂಪ್ರದಾಯಿಕ ನೃತ್ಯಕಲೆಗಳ ಸಂರಕ್ಷಣೆ ಮತ್ತು ಉತ್ತೇಜನದ ಉದ್ದೇಶದಿಂದ ನವೆಂಬರ್ 7ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಶಂಭಲ ಮಾಸ್ಟರ್ಸ್ ಸಂಗೀತ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ವಿಶ್ವ ಕುಂಡಲಿನಿ ಸಂಘದ ಅಧ್ಯಕ್ಷ ಸ್ವಾಮಿ ಜ್ಞಾನಪ್ರಭು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶಾಖಪಟ್ಟಣಂನ ತಾರಾಕೇಶ್ವರ ಫೌಂಡೇಷನ್ ಹಾಗೂ ಗ್ರೀನ್ ರಾಯಚೂರು ಸಂಸ್ಥೆಯ ಸಹಯೋಗದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಭಾಗಗಳ ಪ್ರತಿಭಾನ್ವಿತ ಕಲಾವಿದರು ಭಾಗವಹಿಸಲಿದ್ದು, ಸಂಗೀತ ಮತ್ತು ನೃತ್ಯಪ್ರಿಯರಿಗೆ ವಿಶಿಷ್ಟ ಕಲಾನುಭವ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಭಾರತೀಯ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಳೆದ 12 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಅವಧಿಯಲ್ಲಿ ದೇಶದ ವಿವಿಧೆಡೆ ಸುಮಾರು 800 ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜೊತೆಗೆ ಯುವಜನರಲ್ಲಿ ಶಾಸ್ತ್ರೀಯ ಕಲೆಗಳ ಬಗ್ಗೆ ಆಸಕ್ತಿ ಬೆಳೆಸುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ವಿವರಿಸಿದರು.

ಸಮ್ಮೇಳನದಲ್ಲಿ ಮೂರು ಪ್ರಮುಖ ಕಲಾ ಪ್ರದರ್ಶನಗಳು ನಡೆಯಲಿವೆ. ಬೆಳಗಾವಿಯ ಬಾಲಪ್ರತಿಭೆ ಅನಘಾ ಸುಖಟಣಕರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಿತಾರ್ ವಾದನ ನಡೆಯಲಿದೆ. ಖ್ಯಾತ ಕಲಾವಿದ ಪಂಡಿತ ನರಸಿಂಹಲು ವಡವಾಟಿ ಅವರಿಂದ ಹಿಂದೂಸ್ತಾನಿ ಕ್ಲಾರಿನೆಟ್ ವಾದನ ಹಾಗೂ ಗಾಯನ ಕಾರ್ಯಕ್ರಮ ಜರುಗಲಿದೆ. ಇವರಿಗೆ ಹೈದರಾಬಾದ್‌ನ ತಬಲಾ ಕಲಾವಿದ ಎಂ.ಎಸ್. ಪವನ್ ಕುಮಾರ್ ಸಾಥ್ ನೀಡಲಿದ್ದಾರೆ.

ಇದರೊಂದಿಗೆ ಹೈದರಾಬಾದ್‌ನ ನೃತ್ಯ ಕಲಾವಿದೆ ರೇವತಿ ಕೃಷ್ಣ ಹಾಗೂ ಅವರ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ಶಾಸ್ತ್ರೀಯ ಸಂಗೀತದ ಮಾಧುರ್ಯ ಮತ್ತು ನೃತ್ಯಕಲೆಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸುವ ಅವಕಾಶ ಕಲಾರಸಿಕರಿಗೆ ದೊರೆಯಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಯಚೂರು ತಾಲೂಕಿನ ಡೊಂಗರಾಂಪುರ ಗ್ರಾಮದಲ್ಲಿ ಟ್ರಸ್ಟ್ ವತಿಯಿಂದ ಅತ್ಯಾಧುನಿಕ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಆಧ್ಯಾತ್ಮಿಕ ಚಿಂತನೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಭಾರತೀಯ ಪರಂಪರೆಯ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಗೆ ಹಲವು ದಾನಿಗಳು ನೆರವು ನೀಡುತ್ತಿದ್ದು, ಅವರ ಸಹಕಾರದಿಂದ ನಿರ್ಮಾಣ ಕಾರ್ಯ ಮುಂದುವರಿದಿದೆ ಎಂದು ಸ್ವಾಮಿ ಜ್ಞಾನಪ್ರಭು ಮಾಹಿತಿ ನೀಡಿದರು.

ರಾಯಚೂರು ನಗರ ಹಾಗೂ ಜಿಲ್ಲೆಯ ಸಂಗೀತಾಸಕ್ತರು, ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಅಶೋಕ ಪಾಟೀಲ್ ಅತ್ತನೂರು, ಲಾಲ್‌ಜೀ ಪಟೇಲ್, ರಮೇಶಕುಮಾರ ಹಾಗೂ ರಾಜೇಂದ್ರ ಕುಮಾರ ಶಿವಾಳೆ ಉಪಸ್ಥಿತರಿದ್ದರು.