ರಾಯಚೂರು, ಸೆ.23: ಎನ್ಎಚ್-748ಎ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ ನಿಗದಿಪಡಿಸಿರುವ ಪ್ರಸ್ತುತ ಮಾರ್ಗವನ್ನು ಮರುಪರಿಶೀಲಿಸಿ, ಅನಗತ್ಯ ಹೆಚ್ಚುವರಿ ದೂರ ಮತ್ತು ವೆಚ್ಚವನ್ನು ಕಡಿತಗೊಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಂಭವಿಸಬಹುದಾದ ಕೋಟ್ಯಂತರ ರೂಪಾಯಿ ನಷ್ಟವನ್ನು ತಪ್ಪಿಸಬೇಕು ಎಂದು ಬಿಎಸ್ಎಸ್ ಸಮಿತಿಯ ಎಚ್.ಎಂ. ಬಾಬು ಆಗ್ರಹಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆಯನ್ವಯ ಎನ್ಎಚ್-748ಎ ಹೆದ್ದಾರಿ ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ರಾಯಚೂರು ತಾಲೂಕು ವ್ಯಾಪ್ತಿಯ ಹುಣಸ್ಯಾಳ ಹುದಾದಿಂದ ಮಮದಾಪುರ, ನೆಲಹಾಳ, ಮಿಟ್ಟಿಮಲ್ಕಾಪುರ, ಸಿದ್ರಾಂಪುರ ಹಾಗೂ ಗೌಸನಗರ ಮೂಲಕ ಹೈದರಾಬಾದ್ ರಸ್ತೆಗೆ ಸಂಪರ್ಕಿಸುವಂತೆ ರೂಪಿಸಿರುವ ಮಾರ್ಗದಿಂದ ಸುಮಾರು 18ರಿಂದ 20 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾಗುತ್ತದೆ ಎಂದು ಹೇಳಿದರು.
ಈ ರೀತಿಯ ಉದ್ದವಾದ ಮಾರ್ಗದಿಂದ ಭೂಸ್ವಾಧೀನ, ರಸ್ತೆ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹುಣಸ್ಯಾಳ ಹುದಾದಿಂದ ಗೋನಾಳ, ಪತ್ತೇಪುರ, ಮಾರ್ಚೇಡ್, ಹೊಸಪೇಟೆ, ಚಿಕ್ಕಸೂಗೂರು ಹಾಗೂ ದೇವಸೂಗೂರು ಮಾರ್ಗವಾಗಿ ಹೈದರಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗವನ್ನು ಪರಿಶೀಲಿಸಬೇಕು. ಈ ಮಾರ್ಗವನ್ನು ಆಯ್ಕೆ ಮಾಡಿದರೆ ಹೆದ್ದಾರಿಯ ಒಟ್ಟು ದೂರ ಕಡಿಮೆಯಾಗುವುದರ ಜೊತೆಗೆ ನಿರ್ಮಾಣ ವೆಚ್ಚವೂ ತಗ್ಗಲಿದ್ದು, ಸಾರ್ವಜನಿಕರ ಸಂಚಾರಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಳಗಾವಿ–ಹುನಗುಂದ ಭಾಗದಿಂದ ರಾಯಚೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಲಿಂಗಸುಗೂರು, ಸಿರವಾರ ಮತ್ತು ದೇವದುರ್ಗ ತಾಲೂಕುಗಳ ಮೂಲಕ ರಾಯಚೂರು ತಾಲೂಕಿನ ಕಲ್ಮಲ–ಹುಣಸ್ಯಾಳವರೆಗೆ ನಿಗದಿಪಡಿಸಿರುವ ಮಾರ್ಗ ಸೂಕ್ತವಾಗಿದೆ. ಆದರೆ ಹುಣಸ್ಯಾಳದ ನಂತರದ ಮಾರ್ಗದಲ್ಲಿ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ಭೌಗೋಳಿಕ ಪರಿಸ್ಥಿತಿ, ಭೂಸ್ವಾಧೀನ ವೆಚ್ಚ, ಪ್ರಯಾಣದ ದೂರ ಹಾಗೂ ಸಾರ್ವಜನಿಕರಿಗೆ ಆಗುವ ಅನುಕೂಲಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಾಂತ್ರಿಕ ಮತ್ತು ವೈಜ್ಞಾನಿಕ ಆಧಾರದ ಮೇಲೆ ರೂಟ್ಮ್ಯಾಪ್ನ್ನು ಮರುನಿಗದಿಪಡಿಸಬೇಕು ಎಂದು ಎಚ್.ಎಂ. ಬಾಬು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಉಪಸ್ಥಿತರಿದ್ದರು.



