ಸಿರವಾರ, ಅ. 24: ತುಂಗಭದ್ರಾ ಎಡದಂಡೆ ಕಾಲುವೆಯ ಡಿಸ್ಟ್ರಿಬ್ಯೂಟರ್ ನಂ. 82ರ ಉಪಕಾಲುವೆಯ ಕೆಳಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಡಿ-82 ಉಪಕಾಲುವೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪದ ಪರಿಣಾಮ ಜೋಳದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳನ್ನು ರಕ್ಷಿಸಲು ಕೂಡಲೇ ನೀರು ಬಿಡುಗಡೆ ಮಾಡಿ, ಕನಿಷ್ಠ 10 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಅವೈಜ್ಞಾನಿಕ ವಾರಬಂದಿ ಪದ್ಧತಿಯಿಂದ ಮೇಲ್ಭಾಗದ ರೈತರಿಗೆ ಹೆಚ್ಚಿನ ನೀರು ದೊರೆಯುತ್ತಿದ್ದು, ಕೆಳಭಾಗದ ರೈತರು ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದರು. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಎಕರೆವಾರು ಸಮಾನವಾಗಿ ನೀರು ಹಂಚಿಕೆಯಾಗುವಂತೆ ವೈಜ್ಞಾನಿಕ ರೊಟೇಷನ್ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಲುವೆಯಿಂದ ಅಕ್ರಮವಾಗಿ ನೀರು ಪಡೆಯುತ್ತಿರುವುದು, ದೊಡ್ಡ ಗಾತ್ರದ ಪೈಪುಗಳ ಮೂಲಕ ನೀರು ಬಳಸುತ್ತಿರುವುದು ಹಾಗೂ ಕಾಲುವೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕೆಳಭಾಗದ ಜಮೀನುಗಳಿಗೆ ನೀರು ತಲುಪುವವರೆಗೆ ಮೇಲ್ಭಾಗದಲ್ಲಿ ನೀರಿನ ಬಳಕೆಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಸಿರವಾರ ತಹಶೀಲ್ದಾರರ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ಉಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ರಾಜ್ಯ ಕಾರ್ಯದರ್ಶಿ ಸೂರುರಯ್ಯ ಆರ್.ಎಸ್. ಮಠ, ಯಂಕಪ್ಪ ಕಾರಬಾರಿ, ದೊಡ್ಡಬಸನಗೌಡ, ಪ್ರಭಾಕರ ಪಾಟೀಲ್, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಮಾ.ಪಾ., ಲಿಂಗರೇಡ್ಡಿ ಪಾಟೀಲ್, ಬೂದಯ್ಯಸ್ವಾಮಿ, ಎ. ಗೋವಿಂದಪ್ಪ ನಾಯಕ, ಜಿಲ್ಲಾ ಉಪಾಧ್ಯಕ್ಷ ಹನುಮನಗೌಡ ಜಾಲಹಳ್ಳಿ, ವೀರೇಶ ಗವಿಗಟ್ಟು, ಸಿದ್ದಯ್ಯಸ್ವಾಮಿ ಗೊರ್ಕಲ್, ದೇವೇಂದ್ರಪ್ಪ ನಾಯಕ, ಶಂಕ್ರಪ್ಪ ದೇವತಗಲ್, ಹಾಜಿಮಸ್ತಾನ್, ದೇವರಾಜ ನಾಯಕ, ಸಿರವಾರ ತಾಲೂಕು ಅಧ್ಯಕ್ಷ ಶಂಕ್ರಪ್ಪ ದೇವತಗಲ್, ತಾಲೂಕು ಪದಾಧಿಕಾರಿ ಬಸವರಾಜ ನವಲಕಲ್, ಜಿಲ್ಲಾ ಮುಖಂಡ ದೊ. ದೇವೇಂದ್ರಪ್ಪ ನಾಯಕ, ಲಿಂಗಸುಗೂರು ತಾಲೂಕು ಅಧ್ಯಕ್ಷ ಮಲ್ಲನಗೌಡ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.



