ಕವಿತಾಳ: ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ಉದ್ದೇಶದಿಂದ ನಾರಾಯಣಪುರ ಬಲದಂಡೆ ನಾಲೆಯ 9ಎ ಕಾಲುವೆ ಹಾಗೂ ಉಪಕಾಲುವೆಗಳ ಬಾಕಿ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹಾಗೂ ಮಾನ್ವಿ ಶಾಸಕ ಜಿ. ಹಂಪಯ್ಯ ನಾಯಕ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ಸಮೀಪದ 9ಎ ಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ದೀರ್ಘಕಾಲದಿಂದ ಕಾಮಗಾರಿ ಅಪೂರ್ಣವಾಗಿರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಸ್ಥಳದಲ್ಲಿದ್ದ ರೈತರ ಅಹವಾಲುಗಳನ್ನು ಆಲಿಸಿದರು.
ಈಗಾಗಲೇ ನಿರ್ಮಾಣಗೊಂಡಿರುವ ಕಾಲುವೆಯ ಹಲವು ಭಾಗಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಿಡಗಂಟಿಗಳು ಬೆಳೆದಿರುವುದರಿಂದ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ಕಾಲುವೆಯ ಕೊನೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ, ಒಂದು ವಾರದೊಳಗೆ ಕಾಲುವೆಯಲ್ಲಿ ತುಂಬಿರುವ ಹೂಳು ಹಾಗೂ ಬೆಳೆದಿರುವ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಾಕಿ ಉಳಿದಿರುವ ಕಾಲುವೆ ಮತ್ತು ಉಪಕಾಲುವೆಗಳ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಲುವೆಗೆ ನೀರು ಹರಿಸಲು ಅಗತ್ಯವಿರುವ ತಾಂತ್ರಿಕ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ವಿಳಂಬ ಮಾಡದೆ ಕೈಗೊಳ್ಳಬೇಕು. ಕಾಮಗಾರಿಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಲುವೆ ನಿರ್ಮಾಣದ ಉದ್ದೇಶವೇ ರೈತರ ಜಮೀನುಗಳಿಗೆ ನೀರು ಒದಗಿಸುವುದಾಗಿದ್ದು, ಕಾಮಗಾರಿ ಅಪೂರ್ಣವಾಗಿರುವ ಕಾರಣ ರೈತರು ನೀರಿನಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಬಾರದು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕಿರಲಿಂಗಪ್ಪ, ಶರಣಪ್ಪ ಗುಡದಿನ್ನಿ, ಶೇಖರಪ್ಪ ಸಾಹುಕಾರ್ ಹಟ್ಟಿ, ವೀರೇಶ್ ಬಳೆಗಾರ, ಶಿವಣ್ಣ ವಕೀಲ, ಕರಿಯಪ್ಪ ತೋಳದು, ಅಯ್ಯಪ್ಪ ನಿಲಗಲ್, ಮೌನೇಶ್ ಹಿರೇಕುರುಬರು, ನವೀನ್ ಕುಮಾರ್ ಸೇರಿದಂತೆ ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್ಗಳು, ಸ್ಥಳೀಯ ಮುಖಂಡರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.



