ರಾಯಚೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಹಿಂಪಡೆಯಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಇಂಡಿಯಾ ಮೈತ್ರಿಕೂಟದ ನೇತೃತ್ವದ ಮತ ಕಾವಲು ಸಮಿತಿಯು ಅ.9ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಸಮಿತಿ ಮುಖಂಡ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ಹೇಳಿದರು.
ನಗರದ ನೃಪತುಂಗ ಹೋಟೆಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನೇತಾಜಿ ನಗರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಎಸ್ಐಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿಷ್ಪಕ್ಷಪಾತತೆ ಕಾಯ್ದುಕೊಳ್ಳಲಾಗುತ್ತಿಲ್ಲ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಪರಿಷ್ಕರಣೆ ನೆಪದಲ್ಲಿ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮತದಾರರ ಹಕ್ಕಿನ ರಕ್ಷಣೆಯೇ ಈ ಹೋರಾಟದ ಪ್ರಮುಖ ಉದ್ದೇಶವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮತ ಕಾವಲು ಸಮಿತಿ ಮುಖಂಡ ಮಾರೆಪ್ಪ ಹರವಿ ಮಾತನಾಡಿ, ಎಸ್ಐಆರ್ ಕುರಿತು ಮೇ 4ರಿಂದಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಅರ್ಹ ಮತದಾರರ ಹೆಸರು ಕೈಬೀಳಬಹುದು ಎಂಬ ಆತಂಕ ವಿವಿಧೆಡೆ ವ್ಯಕ್ತವಾಗುತ್ತಿದೆ. ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸವನ್ನು ಕಾಪಾಡಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದರು.
ಚುನಾವಣಾ ಆಯೋಗವು ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಎಸ್ಐಆರ್ ಕುರಿತು ಎದ್ದಿರುವ ಅನುಮಾನಗಳಿಗೆ ಆಯೋಗ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಈ ಪ್ರಕ್ರಿಯೆಯನ್ನು ರದ್ದುಪಡಿಸುವುದರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹುದ್ದೆ ತೊರೆಯಬೇಕು ಎಂದು ಅವರು ಒತ್ತಾಯಿಸಿದರು.
ಕೆ.ಜಿ. ವೀರೇಶ್ ಮಾತನಾಡಿ, ಎಸ್ಐಆರ್ನಿಂದ ದಲಿತರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಸೇರಿದಂತೆ ದುರ್ಬಲ ಮತ್ತು ಶ್ರಮಿಕ ವರ್ಗದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ಆರೋಪಿಸಿದರು. ಯಾವುದೇ ಸಮುದಾಯದ ಮತದಾನದ ಹಕ್ಕಿಗೆ ಧಕ್ಕೆಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ. ಅರ್ಹರೆಲ್ಲರ ಹೆಸರನ್ನು ಉಳಿಸಿಕೊಂಡು ಪಾರದರ್ಶಕವಾಗಿ ಪರಿಷ್ಕರಣೆ ನಡೆಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಅ.9ರ ಪ್ರತಿಭಟನೆಯಲ್ಲಿ ಇಂಡಿಯಾ ಮೈತ್ರಿಕೂಟದ ವಿವಿಧ ಪಕ್ಷಗಳು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರು ಭಾಗವಹಿಸಲಿದ್ದಾರೆ. ನೇತಾಜಿ ನಗರದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆಯುವ ಮೆರವಣಿಗೆಗೆ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮುಖಂಡರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಅಸಿಮುದ್ದಿನ್, ಜಯಣ್ಣ, ಜಯಂತರಾವ್ ಪತಂಗೆ, ಖಾಜಾ ಅಸ್ಲಾಂ, ಜಾನ್ ವೆಸ್ಲಿ, ಆಂಜಿನೇಯ್ಯ ಕುರುಬದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



