ಸಿರವಾರ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಿರವಾರ ಪಟ್ಟಣದ ಮತಗಟ್ಟೆಯಲ್ಲಿ ಶೇ.91.98ರಷ್ಟು ಮತದಾನ ದಾಖಲಾಗಿದ್ದು, ಶಿಕ್ಷಕ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 139ರಲ್ಲಿ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಯಿತು. ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಒಟ್ಟು 212 ಮತದಾರರ ಪೈಕಿ 195 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಸಿರವಾರ ತಾಲೂಕಿನ ಸಿರವಾರ, ಕವಿತಾಳ, ಕಲ್ಲೂರು, ಕುರುಕುಂದಿ, ಬಲ್ಲಟಗಿ, ಬಾಗಲವಾಡ, ಹರವಿ, ಮಾಡಗಿರಿ ಕಲ್ಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಶಿಕ್ಷಕ ಮತದಾರರಿಗೆ ಈ ಕೇಂದ್ರದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ ಶಿಕ್ಷಕರು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರು ಮತದಾನದಲ್ಲಿ ಭಾಗವಹಿಸಿದರು.
ಬೆಳಗ್ಗೆಯಿಂದಲೇ ಶಿಕ್ಷಕರು ಮತಗಟ್ಟೆಗೆ ಆಗಮಿಸಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಚುನಾವಣಾ ಸಿಬ್ಬಂದಿ ನಿಗದಿತ ನಿಯಮಗಳಂತೆ ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಿದರು.
ಮತದಾನದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಹಂಪಣ್ಣ ಚಂಡೂರು, ತಹಶೀಲ್ದಾರ್ ಅಶೋಕ ಪವಾರ, ಸಿಡಿಪಿಒ ವಿರೂಪಾಕ್ಷಯ್ಯ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಹಾಗೂ ಜಸ್ಪಾಲ್ ಸಿಂಗ್ ಮತಗಟ್ಟೆಗೆ ಭೇಟಿ ನೀಡಿ ಚುನಾವಣಾ ವ್ಯವಸ್ಥೆ ಮತ್ತು ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪಿಎಸ್ಐ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ಮತಗಟ್ಟೆ ಸುತ್ತಮುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿತು.



