ರಾಯಚೂರು: ಕಲಬುರಗಿಯಲ್ಲಿ ಸೆ.27ರಂದು ನಡೆಸಲು ಉದ್ದೇಶಿಸಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಬಸವಾದಿ ಶರಣರ ತತ್ವ ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಘಟಕದ ಅಧ್ಯಕ್ಷ ರುದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ 17ನೇ ಶತಮಾನದಲ್ಲಿ ಬದುಕಿದ್ದ ಕಾಡಸಿದ್ದೇಶ್ವರರು ಶರಣ ಮಾರ್ಗದ ಉಪಾಸಕರಾಗಿದ್ದು, ಸುಮಾರು 500 ವಚನಗಳನ್ನು ರಚಿಸುವ ಮೂಲಕ ಲಿಂಗಾಯತ ತತ್ವವನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು. ಆದರೆ, ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯವರ ಇತ್ತೀಚಿನ ನಿಲುವುಗಳು ಮೂಲ ಶರಣ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು.

ಕನ್ನೇರಿ ಸ್ವಾಮೀಜಿಯವರ ಕೆಲವು ಹೇಳಿಕೆಗಳು ಮತ್ತು ನಡೆ ಕುರಿತು ಈ ಹಿಂದೆ ನ್ಯಾಯಾಲಯಗಳಲ್ಲಿಯೂ ವಿಚಾರಣೆ ನಡೆದಿದ್ದು, ಅವರ ಮಾತು ಹಾಗೂ ವರ್ತನೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಸೂಚನೆ ನೀಡಿವೆ ಎಂದು ಬಸವರಾಜ ಹೇಳಿದರು. ಬಸವ ತತ್ವಪರ ಸಂಘಟನೆಗಳು ಸ್ವಾಮೀಜಿಯವರ ಧಾರ್ಮಿಕ ನಿಲುವುಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ ಎಂದರು.

ಕರ್ನಾಟಕ ಸರ್ಕಾರ ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ. ಅಲ್ಲದೆ, ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರವು 2018ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರ ತತ್ವ ಮತ್ತು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ ಶರಣರ ಹೆಸರನ್ನು ಬೇರೆ ಧಾರ್ಮಿಕ ಚೌಕಟ್ಟಿಗೆ ಜೋಡಿಸುವ ಪ್ರಯತ್ನಗಳು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

“ಯಾರಾದರೂ ಹಿಂದೂ ಸಮಾವೇಶ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಅದೇ ರೀತಿ ಬಸವಾದಿ ಶರಣರ ಕುರಿತು ಪ್ರತ್ಯೇಕವಾಗಿ ಸಮಾವೇಶ ನಡೆಸಬಹುದು. ಆದರೆ ಶಿವಶರಣರ ತತ್ವಗಳನ್ನು ವೈದಿಕ ಪರಂಪರೆ ಅಥವಾ ಹಿಂದುತ್ವದೊಂದಿಗೆ ಬಲವಂತವಾಗಿ ಜೋಡಿಸುವ ಪ್ರಯತ್ನ ಮಾಡಬಾರದು. ಅದು ಶರಣರ ಮೂಲ ತತ್ವಗಳಿಗೆ ವಿರುದ್ಧವಾದ ನಡೆ” ಎಂದು ಬಸವರಾಜ ಹೇಳಿದರು.

ಕಲಬುರಗಿಯಲ್ಲಿ ಸೆ.27ರಂದು ನಡೆಯಲಿರುವ ಸಮಾವೇಶದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ.25ರಂದು ಕಲಬುರಗಿಯ ಬಸವೇಶ್ವರ ವೃತ್ತದಲ್ಲಿ (ಜಗತ್ ಸರ್ಕಲ್) ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಕನ್ನಡ ಭವನದಿಂದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ಬಸವ ತತ್ವಾಭಿಮಾನಿಗಳು ಹಾಗೂ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹರ್ವಿ ನಾಗನಗೌಡ, ವಕೀಲ ಜೆ. ಬಸವರಾಜ, ಚೆನ್ನಬಸವ, ಡಾ. ಸರ್ವಮಂಗಳ ಸಕ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು..