ರಾಯಚೂರು, ಸೆ.21: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ರಾಯಚೂರು ಜಿಲ್ಲೆಯನ್ನು ODF ಜಿಲ್ಲೆಯೆಂದು ಘೋಷಿಸಲಾಗಿದ್ದರೂ, ಕೆಲವು ಅರ್ಹ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯಗಳು ನಿರ್ಮಾಣವಾಗದಿರುವುದು ಹಾಗೂ ದಾಖಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ ಎಂದು ನಮೂದಿಸಿರುವ ಕೆಲವು ಪ್ರಕರಣಗಳಲ್ಲಿ ವಾಸ್ತವವಾಗಿ ಶೌಚಾಲಯಗಳು ಅಸ್ತಿತ್ವದಲ್ಲಿಲ್ಲದಿರುವುದು ಅಥವಾ ಬಳಕೆಯಲ್ಲಿಲ್ಲದಿರುವ ಕುರಿತು ದೂರುಗಳು ಸ್ವೀಕೃತವಾಗಿವೆ.
ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ವೈಯಕ್ತಿಕ ಗೃಹ ಶೌಚಾಲಯಗಳ ಭೌತಿಕ ಪರಿಶೀಲನೆ, ಅನುದಾನದ ಬಳಕೆ, ಫಲಾನುಭವಿಗಳ ವಿವರಗಳು, ಶೌಚಾಲಯಗಳ ಪ್ರಸ್ತುತ ಸ್ಥಿತಿ ಹಾಗೂ ಬಳಕೆಯ ಕುರಿತು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಯಚೂರು ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ್ ಕಾಂದೂ ಅವರು ಸೂಚಿಸಿದ್ದಾರೆ.
ಸದರಿ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ರಚಿಸಲಾದ ತಂಡಗಳು ಆಯಾ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಗಳ ಪ್ರತಿಯೊಂದು ಮನೆಗೆ ಕಡ್ಡಾಯವಾಗಿ ಭೇಟಿ ನೀಡಿ, ವೈಯಕ್ತಿಕ ಗೃಹ ಶೌಚಾಲಯಗಳ ಲಭ್ಯತೆ, ನಿರ್ಮಾಣದ ಸ್ಥಿತಿ ಹಾಗೂ ಶೌಚಾಲಯಗಳ ಬಳಕೆಯ ಕುರಿತು ಪರಿಶೀಲನೆ ನಡೆಸಲಿವೆ.
ಸರ್ವೆ ಸಂದರ್ಭದಲ್ಲಿ “ಶೌಚಾಲಯ ಬಳಕೆ” ಕುರಿತು ನಿರ್ಮಲಾ ರಾಯಚೂರು ಮೊಬೈಲ್ ಅಪ್ಲಿಕೇಶನ್ನಲ್ಲಿ ಪ್ರತಿಯೊಂದು ಮನೆಗೆ ಸಂಬಂಧಿಸಿದ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಗ್ರಾಮ ಪಂಚಾಯತಿವಾರು ರಚಿಸಲಾದ ತಂಡಗಳು ದಿನಾಂಕ 21.09.2026ರಿಂದ ಸರ್ವೆ ಕಾರ್ಯವನ್ನು ಪ್ರಾರಂಭಿಸಿ 15 ದಿನಗಳೊಳಗಾಗಿ ಪೂರ್ಣಗೊಳಿಸಬೇಕು. ನಂತರ ಗ್ರಾಮ ಪಂಚಾಯತಿವಾರು ಹಾಗೂ ತಾಲೂಕುವಾರು ಮಾಹಿತಿಯನ್ನು ಕ್ರೋಢೀಕರಿಸಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.
ಸರ್ವೆ ಕಾರ್ಯದ ಗುಣಮಟ್ಟ ಮತ್ತು ಪ್ರಗತಿಯನ್ನು ಖಚಿತಪಡಿಸುವ ಉದ್ದೇಶದಿಂದ, ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ಹಾಗೂ ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಅವರನ್ನು ಗ್ರಾಮ ಪಂಚಾಯತಿವಾರು ತಂಡಗಳು ಸಲ್ಲಿಸುವ ವರದಿಯನ್ನು ಪರಿಶೀಲಿಸುವುದು ಹಾಗೂ ಸರ್ವೆ ಕಾರ್ಯದ ಮೇಲ್ವಿಚಾರಣೆ ನಡೆಸುವ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
ಅದೇ ರೀತಿ, ಜಿಲ್ಲಾ ಪಂಚಾಯತಿಯ ವತಿಯಿಂದ ಸರ್ವೆ ಕಾರ್ಯದ ಮೇಲ್ವಿಚಾರಣೆ ಹಾಗೂ ಪ್ರಗತಿ ಪರಿಶೀಲನೆಗಾಗಿ ತಾಲೂಕುವಾರು ಸಮಾಲೋಚಕರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸಮಗ್ರ ಸರ್ವೆಯ ಮೂಲಕ ಜಿಲ್ಲೆಯಲ್ಲಿ ವೈಯಕ್ತಿಕ ಗೃಹ ಶೌಚಾಲಯಗಳ ನೈಜ ಸ್ಥಿತಿ, ಲಭ್ಯತೆ ಹಾಗೂ ಬಳಕೆಯ ಕುರಿತು ವಾಸ್ತವಿಕ ಮಾಹಿತಿಯನ್ನು ಸಂಗ್ರಹಿಸಿ, ಅಗತ್ಯವಿರುವ ಅರ್ಹ ಕುಟುಂಬಗಳನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



