ರಾಯಚೂರು, ಸೆ.20: ಮಾನ್ವಿ–ರಾಯಚೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ-23ರ ಕಲೂರು ಸಮೀಪ ಭಾನುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ KA-17-Z-8615 ನೋಂದಣಿ ಸಂಖ್ಯೆಯ ಕಾರು ಮಾನ್ವಿಯಿಂದ ರಾಯಚೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ಕಲೂರು ಸಮೀಪ ರಸ್ತೆ ಮಧ್ಯಭಾಗದಲ್ಲಿದ್ದ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರ ಹೆಸರು, ವಿಳಾಸ ಹಾಗೂ ವಯಸ್ಸಿನ ವಿವರಗಳು ಇನ್ನೂ ಖಚಿತವಾಗಿಲ್ಲ. ಅವರ ಆರೋಗ್ಯ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಅಪಘಾತದ ರಭಸಕ್ಕೆ ರಸ್ತೆ ಮಧ್ಯದಲ್ಲಿದ್ದ ಬೀದಿ ದೀಪದ ಕಂಬ ಬಾಗಿದ್ದು, ಅಪಘಾತಕ್ಕೀಡಾದ ಕಾರು ಕೂಡ ಸ್ಥಳದಲ್ಲೇ ಉಳಿದಿರುವುದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಇತರೆ ವಾಹನಗಳಿಗೆ ತೊಂದರೆಯಾಗುವ ಸಾಧ್ಯತೆ ಉಂಟಾಗಿದೆ.
ಮಾನ್ವಿ–ರಾಯಚೂರು ರಾಜ್ಯ ಹೆದ್ದಾರಿ-23 ಪ್ರಮುಖ ಸಂಚಾರ ಮಾರ್ಗವಾಗಿರುವುದರಿಂದ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಬಾಗಿರುವ ಬೀದಿ ದೀಪದ ಕಂಬವನ್ನು ಸುರಕ್ಷಿತವಾಗಿ ತೆರವುಗೊಳಿಸಬೇಕು. ಜೊತೆಗೆ ಅಪಘಾತಕ್ಕೀಡಾದ ವಾಹನವನ್ನು ರಸ್ತೆ ಬದಿಗೆ ಸ್ಥಳಾಂತರಿಸಿ, ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.



