ಕವಿತಾಳ: ಪಟ್ಟಣದ ಶ್ರೀ ಅಂಜನಾದ್ರಿ ಸ್ನೇಹ ಶಕ್ತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಸೋಮವಾರ ಸಂಘದ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಶಿವರಾಜ್ ಪಾಟೀಲ್ ಡೋಣಮರಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಬಲ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ರಾಷ್ಟ್ರೀಯ ಬ್ಯಾಂಕುಗಳಿಗಿಂತ ಸಹಕಾರಿ ಸಂಘಗಳು ಸದಸ್ಯರಿಗೆ ಹೆಚ್ಚು ಹತ್ತಿರವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುತ್ತಿವೆ. ಸಹಕಾರಿ ಸಂಘವು ಯಾರೊಬ್ಬರ ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ; ಪ್ರತಿಯೊಬ್ಬ ಸದಸ್ಯರೂ ಸಂಘದ ಪಾಲುದಾರರು ಹಾಗೂ ಮಾಲೀಕರಾಗಿದ್ದಾರೆ ಎಂದು ಹೇಳಿದರು.
2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದ ವರದಿಯಂತೆ, ಸಂಘವು ₹16,93,989 ನಿವ್ವಳ ಲಾಭ ಗಳಿಸಿದೆ. ಸಂಘದ ಒಟ್ಟು ಆಸ್ತಿ ಮತ್ತು ಜವಾಬ್ದಾರಿಗಳ ಮೊತ್ತ ₹5,81,44,584 ಆಗಿದ್ದು, ₹37,89,700 ಸಂದಾಯವಾದ ಷೇರು ಬಂಡವಾಳ ಹಾಗೂ ₹5,09,85,022 ಠೇವಣಿ ಸಂಗ್ರಹಿಸಿದೆ ಎಂದು ಮಹಾಸಭೆಯಲ್ಲಿ ಮಾಹಿತಿ ನೀಡಲಾಯಿತು.
ವಿವಿಧ ಬ್ಯಾಂಕುಗಳಲ್ಲಿ ₹1,17,50,000 ಹೂಡಿಕೆ ಹೊಂದಿರುವ ಸಂಘವು ಸದಸ್ಯರ ಆರ್ಥಿಕ ಅಗತ್ಯಗಳಿಗೆ ₹4,23,79,960 ಸಾಲ ಮತ್ತು ಮುಂಗಡ ವಿತರಿಸಿದ್ದು, ₹7,99,640 ನಗದು ಶಿಲ್ಕು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಯಿತು. ಸಂಘದ ಆರ್ಥಿಕ ಪ್ರಗತಿ ಮತ್ತು ಸದಸ್ಯರ ಹಿತದೃಷ್ಟಿಯಿಂದ ಈ ಸಾಲಿನಲ್ಲಿ ಶೇ.8ರಷ್ಟು ಲಾಭಾಂಶ ಘೋಷಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿತು.
ಮಹಾಸಭೆಯ ಅಂಗವಾಗಿ ಉತ್ತಮ ಗ್ರಾಹಕರನ್ನು ಹಾಗೂ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಾಮಾಜಿಕ ಸೇವೆಯನ್ನು ಗುರುತಿಸಿ ಕಾಳಪ್ಪ ಪತ್ತಾರ್ ಮತ್ತು ಮಂಜುನಾಥ್ ಬಳ್ಳಾರಿ ಅವರಿಗೆ ಕೆ.ಯು.ಡಬ್ಲ್ಯೂ.ಜೆ. ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಗೌರವಿಸಲಾಯಿತು.
ಸಭೆಯಲ್ಲಿ ಶ್ರೀಶೈಲಪ್ಪ ತಾತ, ಕರಿಯಪ್ಪ ತಾತ, ಸಿದ್ದಯ್ಯ ಸ್ವಾಮಿ, ಸಂಘದ ಉಪಾಧ್ಯಕ್ಷ ನಿಂಗಪ್ಪ ತೋಳದ, ಮುಖ್ಯ ಕಾರ್ಯನಿರ್ವಾಹಕ ಶಿವಕುಮಾರ್ ಸಾಲಿಮನಿ, ಸ್ಥಳೀಯ ಮುಖಂಡ ತಿಪ್ಪಯ್ಯಸ್ವಾಮಿ, ಗಿರಿಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆದನಗೌಡ ವಟಗಲ್, ಯಮನಪ್ಪ ದಿನ್ನಿ, ಮಂಜುನಾಥ ಪತ್ತಾರ, ಗಂಗಪ್ಪ ಎಕ್ಲಾಸ್ಪುರ, ಮೌನೇಶ್ ಪೂಜಾರಿ, ಹನುಮಂತ ಪಾಟಿಲ್, ಮಾಳಪ್ಪ ಸೇರಿದಂತೆ ಸಂಘದ ಸದಸ್ಯರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.



