ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಯಚೂರಿನಲ್ಲಿ ಆಯೋಜಿಸಲು ಉದ್ದೇಶಿಸಿರುವ 41ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಪೂರ್ವಸಿದ್ಧತೆಗಳ ಕುರಿತು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಅವರೊಂದಿಗೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಸಮಾಲೋಚನೆ ನಡೆಸಿದರು.

ನಗರದಲ್ಲಿರುವ ಶಾಸಕರ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ ನಿಯೋಗ, ಸಮ್ಮೇಳನದ ರೂಪುರೇಷೆ, ಅಗತ್ಯ ಸಿದ್ಧತೆಗಳು ಹಾಗೂ ಯಶಸ್ವಿ ಆಯೋಜನೆಗೆ ಬೇಕಾದ ಸಹಕಾರದ ಕುರಿತು ವಿವರವಾಗಿ ಚರ್ಚಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದದ್ದಲ್ ಬಸನಗೌಡ, ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ರಾಯಚೂರಿನಲ್ಲಿ ಯಶಸ್ವಿಯಾಗಿ ನಡೆಸುವುದರಿಂದ ಜಿಲ್ಲೆಗೆ ಉತ್ತಮ ಹೆಸರು ಬರಲಿದೆ. ಸಮ್ಮೇಳನದ ಆಯೋಜನೆಗೆ ತಮ್ಮಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಲ್ಲದೆ, ಸಮ್ಮೇಳನದ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಸಂಘದ ಪದಾಧಿಕಾರಿಗಳು ಪೂರ್ವಸಿದ್ಧತಾ ಕಾರ್ಯಗಳನ್ನು ಮುಂದುವರಿಸುವಂತೆ ಸಲಹೆ ನೀಡಿದರು.

ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ, ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ, ರಾಜ್ಯ ಸಮಿತಿ ಸದಸ್ಯ ಬಸವರಾಜ್ ನಾಗಡದಿನ್ನಿ, ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್, ಹಿರಿಯ ಪತ್ರಕರ್ತ ಶಿವಮೂರ್ತಿ ಹಿರೇಮಠ್, ಸಂಘದ ಉಪಾಧ್ಯಕ್ಷ ಮಹಾನಂದ ನಾಯಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ರೆಡ್ಡಿ, ನೀಲಕಂಠ ಸ್ವಾಮಿ, ಪ್ರಸನ್ನ ಜೈನ್, ಪತ್ರಕರ್ತರಾದ ಸತೀಶ್ ಹಿರೇಮಠ್, ಅಣ್ಣಪ್ಪ ಮೇಟಿ ಗೌಡ, ಸಂಘದ ಸದಸ್ಯರಾದ ಖಾದರ್, ಮೊಹ್ಮದ್ ಜಿಲಾನಿ, ಕೃಷ್ಣ ಇನಂದಾರ್, ಮಂಜು ಎತ್ತಿನಮಾಳಗಿ, ಬಾಲು ಸೇರಿದಂತೆ ಇತರರು ಉಪಸ್ಥಿತರಿದ್ದರು.