ತುಂಗ ಬಿಂಬ/ಕುಷ್ಟಗಿ: ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಹಾಗೂ ಧೈರ್ಯವಾಗಿ ಸಂಚರಿಸಲು ಆತ್ಮರಕ್ಷಣೆಯ ಕಲೆ ಕಲಿಯುವುದು ಅತ್ಯಂತ ಅಗತ್ಯ ಎಂದು ಇನ್ನರ್ ವ್ಹೀಲ್ ಕ್ಲಬ್ ಕುಷ್ಟಗಿ ಅಧ್ಯಕ್ಷೆ ಗೌರಮ್ಮ ಕುಡತನಿ ಹೇಳಿದರು. ಇನ್ನರ್ ವ್ಹೀಲ್ ಕ್ಲಬ್ ಕುಷ್ಟಗಿ ವತಿಯಿಂದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಕರಾಟೆ ಹಾಗೂ ಆತ್ಮರಕ್ಷಣಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರಾಟೆ ಬ್ಲ್ಯಾಕ್ ಬೆಲ್ಟ್ ಮಾಸ್ಟರ್ಸ್ ಮೌನೇಶ್ ಕೊಪ್ಪರ್ ಹಾಗೂ ವಿಠಲ್ ಅವರು ವಿದ್ಯಾರ್ಥಿನಿಯರಿಗೆ ದಿನನಿತ್ಯದ ಜೀವನದಲ್ಲಿ ಉಪಯೋಗವಾಗುವ ವಿವಿಧ ಆತ್ಮರಕ್ಷಣಾ ತಂತ್ರಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿ ತರಬೇತಿ ನೀಡಿದರು. ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ್ ಪಾಟೀಲ್ ಅವರಿಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರ ಆತ್ಮವಿಶ್ವಾಸ ಹಾಗೂ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಮುಂದಿನ ತಿಂಗಳಿನಿಂದ ಬೆಲ್ಟ್‌ವಾರು ಆತ್ಮರಕ್ಷಣಾ ತರಬೇತಿ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಶ್ರೀದೇವಿ ಮಸ್ಕಿಮಠ, ಜಿಲ್ಲಾ ಕಾರ್ಯದರ್ಶಿ ಡಾ. ಪಾರ್ವತಿ ಪಳೋಟಿ, ಎಡಿಟರ್ ಶಾರದಾ ಶೆಟ್ಟರ್, ಸದಸ್ಯರಾದ ಸುಮಿತ್ರಾ ಕಂಠಿ, ಗಿರಿಜಾ ನಾಗೋಡ, ಶಿವಲೀಲಾ ಮೇಘನಾಪುರ, ಶಿವಲೀಲಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.