ಕುಷ್ಟಗಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಕುಷ್ಟಗಿ ಅಧ್ಯಕ್ಷೆ ಗೌರಮ್ಮ ಕುಡತನಿ ಅವರ ನೇತೃತ್ವದಲ್ಲಿ ಇಳಕಲ್‌ನ ಸುರಕ್ಷಾ ಸೇವಾ ಸಂಸ್ಥೆಯ ಅನಾಥಾಶ್ರಮ ಹಾಗೂ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಆಶ್ರಮದಲ್ಲಿರುವ ವೃದ್ಧರ ಅನುಕೂಲ ಹಾಗೂ ಸೌಕರ್ಯಕ್ಕಾಗಿ ಇನ್ನರ್ ವ್ಹೀಲ್ ಕ್ಲಬ್ ಕುಷ್ಟಗಿ ವತಿಯಿಂದ 15 ಕಬ್ಬಿಣದ ಮಂಚಗಳನ್ನು ಕೊಡುಗೆಯಾಗಿ ನೀಡಲಾಯಿತು. ಜೊತೆಗೆ ದಿನನಿತ್ಯದ ಬಳಕೆಗೆ ಅಗತ್ಯವಾದ ರೇಷನ್ ಮತ್ತು ಅಡುಗೆ ಸಾಮಗ್ರಿಗಳು, ಸೀರೆಗಳು ಹಾಗೂ ಔಷಧಿ ವೆಚ್ಚಕ್ಕಾಗಿ ಧನಸಹಾಯವನ್ನು ಕ್ಲಬ್‌ನ ಸದಸ್ಯರು ಒಟ್ಟಾಗಿ ನೀಡಿದರು.

ಈ ವೇಳೆ ಕ್ಲಬ್ ಸದಸ್ಯರು ವೃದ್ಧರೊಂದಿಗೆ ಕೆಲ ಸಮಯ ಕಳೆಯುತ್ತಾ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅಗತ್ಯಗಳನ್ನು ಆಲಿಸಿದರು. ಪ್ರೀತಿ, ಕಾಳಜಿ ಹಾಗೂ ಮಾನವೀಯ ಸ್ಪಂದನೆಯೊಂದಿಗೆ ನಡೆದ ಈ ಸೇವಾ ಕಾರ್ಯವು ಆಶ್ರಮವಾಸಿಗಳಲ್ಲಿ ಸಂತಸ ಮೂಡಿಸಿತು.

ಗೌರಮ್ಮ ಕುಡತನಿ ಮಾತನಾಡಿ, “ವೃದ್ಧರ ಸೇವೆ ಈಶ್ವರ ಸೇವೆಯಂತೆ. ಸಮಾಜದಲ್ಲಿ ಹಿರಿಯ ನಾಗರಿಕರ ಬಗ್ಗೆ ಕಾಳಜಿ, ಗೌರವ ಮತ್ತು ಸೇವಾ ಮನೋಭಾವ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗೌರಮ್ಮ ಕುಡತನಿ, ಖಜಾಂಚಿ ಪ್ರಭಾ ಬಂಗಾರ ಶೆಟ್ಟರ್, ಎಡಿಟರ್ ಶಾರದ ಶೆಟ್ಟರ್, ಮಮತಾ ಮಾನ್ವಿ, ಶಾರದಮ್ಮ ಕುಡತನಿ, ಶಿವಲೀಲಾ ಹಿರೇಮಠ, ಅಡಿವೆಮ್ಮ ಹಿರೇಮಠ, ಶಾರದ ಜಿಗಜಿನ್ನಿ, ಪ್ರೇಮಾ ಪಾಟೀಲ್, ಗಿರಿಜಾ ನಾಗೋಡ್, ಸುಮಿತ್ರಾ ಕಂಠಿ, ಆಶ್ರಮದ ಕಾರ್ಯದರ್ಶಿ ಬಾಲಚಂದ್ರ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.