ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಂಡು ಸಿಬ್ಬಂದಿ ನೇಮಕಾತಿಗೆ ಮುಂದಾಗಬೇಕು ಹಾಗೂ ಶಕ್ತಿ ಯೋಜನೆಯಡಿ ಸರ್ಕಾರದಿಂದ ನಿಗಮಕ್ಕೆ ಬರಬೇಕಿರುವ ಹಣವನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರ ಮಹಾಮಂಡಳಿ ಒತ್ತಾಯಿಸಿದೆ.
ಈ ಸಂಬಂಧ ಸೆ.19ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಅವರಿಗೆ ಮಹಾಮಂಡಳಿ ವತಿಯಿಂದ ಮನವಿ ಸಲ್ಲಿಸಲಾಯಿತು.
ನಿಗಮದಲ್ಲಿ ಹಲವು ಹುದ್ದೆಗಳು ಖಾಲಿ ಇರುವುದರಿಂದ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಅಗತ್ಯ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ತಕ್ಷಣ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಇದರೊಂದಿಗೆ, ಶಕ್ತಿ ಯೋಜನೆಯಡಿ ನಿಗಮಕ್ಕೆ ಸರ್ಕಾರದಿಂದ ಬರಬೇಕಿರುವ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಸರ್ಕಾರದ ಗಮನ ಸೆಳೆಯಬೇಕು. ನಿವೃತ್ತ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೂ ವಿಶೇಷ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಸಂಸ್ಥೆಯ ಹಿತ, ಕಾರ್ಮಿಕರ ಸಮಸ್ಯೆಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಗಮ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯಗಳ ಕುರಿತು ಸರ್ಕಾರಕ್ಕೆ ಪ್ರತ್ಯೇಕವಾಗಿ ಪತ್ರ ಬರೆದು ಪರಿಹಾರಕ್ಕೆ ಮುಂದಾಗಬೇಕು ಎಂದು ಮಹಾಮಂಡಳಿಯ ಗೌರವಾಧ್ಯಕ್ಷ ಭೀಮರಾವ್ ಯಾರ್ಗೊಳ್ ಮನವಿ ಮಾಡಿದ್ದಾರೆ.



