ಕವಿತಾಳ: ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹಾಗೂ ವಿಶ್ವಕರ್ಮ ಜಯಂತಿ ಅಂಗವಾಗಿ ಪಟ್ಟಣದ ಕೆಎನ್‌ಎನ್‌ಎಲ್ ನಂ.2 ಕಾಲುವೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ನಿಗದಿತ ಸಮಯಕ್ಕೆ ಕಾರ್ಯಕ್ರಮ ಹಾಗೂ ರಾಷ್ಟ್ರಧ್ವಜಾರೋಹಣ ನಡೆಯಲಿಲ್ಲ ಎಂದು ಸ್ಥಳೀಯ ಸಂಘಟನೆಗಳು ಆರೋಪಿಸಿವೆ.

ಸೆ.17ರಂದು ಆಚರಿಸಲಾದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ಸರ್ಕಾರಿ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನಡೆಯದಿರುವ ಬಗ್ಗೆ ಸಾರ್ವಜನಿಕರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಘಟನೆ ಈ ಕಚೇರಿಯಲ್ಲಿ ಈ ಹಿಂದೆಯೂ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ.

ವಿಷಯ ಕುರಿತು ಕಚೇರಿಗೆ ತೆರಳಿ ಪ್ರಶ್ನಿಸಿದ ಸಂದರ್ಭದಲ್ಲಿ ಎಇಇ ವಿದ್ಯಾಸಾಗರ್ ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ಸಂಘಟನೆಗಳ ಪ್ರತಿನಿಧಿಗಳು ದೂರಿದ್ದಾರೆ. ನಂತರ ವಿಷಯವನ್ನು ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸಿರವಾರ ತಹಶೀಲ್ದಾರ್ ಅವರ ಗಮನಕ್ಕೆ ತಂದ ಬಳಿಕ ತಡವಾಗಿ ಧ್ವಜಾರೋಹಣ ಮತ್ತು ವಿಮೋಚನಾ ದಿನಾಚರಣೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಭೀಮ ಆರ್ಮಿ ಅಧ್ಯಕ್ಷ ಆಜಪ್ಪ ಬುಳ್ಳಾಪುರ ಮಾತನಾಡಿ, ಮಹತ್ವದ ದಿನದಂದು ನಿಗದಿತ ಸಮಯಕ್ಕೆ ರಾಷ್ಟ್ರಧ್ವಜಾರೋಹಣ ನಡೆಯದಿರುವುದು ನಿರ್ಲಕ್ಷ್ಯದ ಸಂಕೇತವಾಗಿದೆ. ಘಟನೆ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಇಇ ವಿದ್ಯಾಸಾಗರ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮಕ್ಕೆ ಇಲಾಖೆಯಿಂದ ಪೂರ್ವ ಸೂಚನೆ ನೀಡಲಾಗಿತ್ತೇ, ಜವಾಬ್ದಾರಿ ಯಾರಿಗೆ ವಹಿಸಲಾಗಿತ್ತು, ನಿಗದಿತ ಸಮಯಕ್ಕೆ ಆಚರಣೆ ನಡೆಯದಿರಲು ಕಾರಣವೇನು ಹಾಗೂ ಸಾರ್ವಜನಿಕರ ಆಕ್ಷೇಪದ ನಂತರವೇ ಕಾರ್ಯಕ್ರಮ ನಡೆಸಲು ಕಾರಣವೇನು ಎಂಬುದನ್ನು ಮೇಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಹತ್ವದ ದಿನಗಳ ಆಚರಣೆಯನ್ನು ಕೇವಲ ಔಪಚಾರಿಕತೆಗೆ ಸೀಮಿತಗೊಳಿಸದೆ, ನಿಗದಿತ ಮಾರ್ಗಸೂಚಿ ಮತ್ತು ಆಡಳಿತಾತ್ಮಕ ಶಿಸ್ತಿನೊಂದಿಗೆ ನಡೆಸಬೇಕು. ಘಟನೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅಧಿಕಾರಿಗಳ ವಿವರಣೆಯನ್ನು ಪರಿಶೀಲಿಸಿ ವಾಸ್ತವಾಂಶ ಬಹಿರಂಗಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

“ಕವಿತಾಳದಲ್ಲಿರುವ ನಮ್ಮ ಇಲಾಖೆಯ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ನಿಗದಿತ ಸಮಯಕ್ಕೆ ಧ್ವಜಾರೋಹಣ ನಡೆಯದಿರುವುದು ವಿಷಾದನೀಯ. ಈ ಕುರಿತು ಮಾಹಿತಿ ದೊರೆತಿದ್ದು, ಕಾರ್ಯಕ್ರಮ ವಿಳಂಬವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಅವರಿಂದ ಬರುವ ವಿವರಣೆಯನ್ನು ಪರಿಶೀಲಿಸಿ, ಕರ್ತವ್ಯಲೋಪ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸರ್ಕಾರದ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.” — ಕೋದಂಡರಾಮ ಜಿಲ್ಲಾ ಕಾರ್ಯಪಾಲಕ ಅಭಿಯಂತರ, ನೀರಾವರಿ ಇಲಾಖೆ, ರಾಯಚೂರು

“ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ನಿಗದಿತ ಸಮಯಕ್ಕೆ ಧ್ವಜಾರೋಹಣ ನಡೆಸದೆ ನಿರ್ಲಕ್ಷ್ಯ ತೋರಿರುವುದು ಖಂಡನೀಯ. ಇದೇ ರೀತಿಯ ಘಟನೆ ಮತ್ತೆ ಸಂಭವಿಸಿರುವುದರಿಂದ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ಕರ್ತವ್ಯಲೋಪ ಸಾಬೀತಾದರೆ ಕೂಡಲೇ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಕಾನೂನುಬದ್ಧ ಹೋರಾಟ ನಡೆಸಲಾಗುವುದು.” — ಅಜಪ್ಪ ಬುಳ್ಳಾಪುರ ಅಧ್ಯಕ್ಷ, ಭೀಮ ಆರ್ಮಿ ಸಂಘಟನೆ, ಕವಿತಾಳ