ರಾಯಚೂರು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಪ್ರತಿ ವರ್ಷ ಅರ್ಜಿ ಆಹ್ವಾನಿಸುವುದರ ಜತೆಗೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಅನುದಾನ ಹಾಗೂ ಯೋಜನೆಯ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ–ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಡಿ.ಕೆ. ವೀರೇಶ್ ದಿದ್ದಿಗಿ ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. 2024-25, 2025-26ನೇ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳಿಂದ ಸಾವಿರಾರು ಜನರು ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನೇಕ ಅರ್ಹ ಫಲಾನುಭವಿಗಳಿಗೆ ಇದುವರೆಗೆ ಅನುದಾನ ಅಥವಾ ಯೋಜನೆಯ ಸೌಲಭ್ಯ ದೊರೆತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರತಿ ವರ್ಷ ಅರ್ಜಿ ಆಹ್ವಾನಿಸಿ, ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ ಅರ್ಜಿ ಸಲ್ಲಿಸಿದ ಬಳಿಕ ಅದರ ಮಂಜೂರಾತಿ, ಆಯ್ಕೆ ಹಾಗೂ ಅನುದಾನ ಬಿಡುಗಡೆ ಕುರಿತು ಸ್ಪಷ್ಟ ಮಾಹಿತಿ ನೀಡಲಾಗುತ್ತಿಲ್ಲ. ಇದರಿಂದ ಬಡ ಹಾಗೂ ಹಿಂದುಳಿದ ವರ್ಗಗಳ ಜನರು ನಿಗಮದ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆ, ಮಂಜೂರಾದ ಹಾಗೂ ತಿರಸ್ಕೃತ ಅರ್ಜಿಗಳ ಸಂಖ್ಯೆ ಮತ್ತು ಫಲಾನುಭವಿಗಳಿಗೆ ವಿತರಿಸಿರುವ ಅನುದಾನದ ಮೊತ್ತವನ್ನು ನಿಗಮವು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಅರ್ಜಿಯ ಪ್ರಸ್ತುತ ಸ್ಥಿತಿ, ಆಯ್ಕೆ ಅಥವಾ ಮಂಜೂರಾತಿ ವಿವರ ಹಾಗೂ ಅನುದಾನ ಬಿಡುಗಡೆ ದಿನಾಂಕದ ಕುರಿತು ಪಾರದರ್ಶಕ ಮಾಹಿತಿ ನೀಡಬೇಕು ಎಂದು ಅಗ್ರಹಿಸಿದ್ದಾರೆ.
ಹಿಂದಿನ ವರ್ಷಗಳ ಅರ್ಜಿಗಳನ್ನು ವಿಲೇವಾರಿ ಮಾಡದೆ ಮತ್ತೆ ಹೊಸದಾಗಿ ಅರ್ಜಿ ಆಹ್ವಾನಿಸುವ ಕ್ರಮಕ್ಕೆ ಸರ್ಕಾರ ಹಾಗೂ ನಿಗಮ ಸ್ಪಷ್ಟನೆ ನೀಡಬೇಕು. ಕಳೆದ ಮೂರು ವರ್ಷಗಳ ಬಾಕಿ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು. ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗಷ್ಟೇ ಸೀಮಿತವಾಗದೆ, ಯೋಜನೆಯ ನೈಜ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಕೆ. ವೀರೇಶ್ ದಿದ್ದಿಗಿ ಒತ್ತಾಯಿಸಿದ್ದಾರೆ.



