ರಾಯಚೂರು, ಸೆ.22: ದಲಿತ ಹೋರಾಟಗಾರರು ಧರಿಸುವ ನೀಲಿ ಶಾಲಿನ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಎಂಆರ್‌ಎಚ್‌ಎಸ್ ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಅವರು ದಲಿತ ಹೋರಾಟಗಾರರ ಭಾವನೆಗಳಿಗೆ ಧಕ್ಕೆ ತಂದಿದ್ದು, ರಾಜ್ಯದ ದಲಿತ ಸಮುದಾಯದ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಾಪ್ ಸಿಂಹ ಅವರ ನೀಲಿ ಶಾಲು ಕುರಿತ ಹೇಳಿಕೆ ರಾಜ್ಯದ ವಿವಿಧೆಡೆ ದಲಿತ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನೀಲಿ ಶಾಲು ದಲಿತ ಸಮುದಾಯದ ಹೋರಾಟ, ಸಮಾನತೆ, ಸಹಬಾಳ್ವೆ, ಸ್ವಾಭಿಮಾನ ಮತ್ತು ಭಾತೃತ್ವದ ಸಂಕೇತವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿದ್ದು, ಆ ಸಂವಿಧಾನದ ಆಶಯಗಳಿಗಾಗಿ ಹೋರಾಡುವವರನ್ನು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಂವಿಧಾನದ ಮೂಲಕವೇ ದೇಶದ ನಾಗರಿಕರಿಗೆ ಮತದಾನದ ಹಕ್ಕು ಸೇರಿದಂತೆ ಹಲವು ಮೂಲಭೂತ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳು ದೊರೆತಿವೆ. ಇದೇ ಸಂವಿಧಾನಾತ್ಮಕ ವ್ಯವಸ್ಥೆಯಡಿ ಪ್ರತಾಪ್ ಸಿಂಹ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಮನ್ನಾಪುರಿ ಅಭಿಪ್ರಾಯಪಟ್ಟಿದ್ದಾರೆ.

ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ಸಾರ್ವಜನಿಕ ಪ್ರತಿನಿಧಿಗಳು ಸ್ಪಷ್ಟವಾಗಿ ಧ್ವನಿ ಎತ್ತಬೇಕು. ದಲಿತ ಸಮುದಾಯದ ಮತಗಳೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವ ಹೊಂದಿವೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಡಾ. ಅಂಬೇಡ್ಕರ್ ನೀಡಿದ ಸಂವಿಧಾನವು ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಶಕ್ತಿ ನೀಡಿದೆ. ಹೀಗಾಗಿ ದಲಿತ ಹೋರಾಟಗಾರರ ಗೌರವ ಹಾಗೂ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು. ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಗೆ ರಾಜ್ಯದ ದಲಿತ ಹೋರಾಟಗಾರರ ಬಳಿ ಕ್ಷಮೆಯಾಚಿಸಬೇಕು ಎಂದು ಹನುಮಂತಪ್ಪ ಮನ್ನಾಪುರಿ ಒತ್ತಾಯಿಸಿದ್ದಾರೆ.

ಮುಂದೆಯೂ ಇದೇ ರೀತಿಯ ಹೇಳಿಕೆಗಳು ಮುಂದುವರಿದರೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.