ರಾಯಚೂರು, ಸೆ.22: ಭೂಮಿ ಹಕ್ಕು, ಪಟ್ಟಾ ಜಮೀನುಗಳಿಗೆ ರಕ್ಷಣೆ ಹಾಗೂ ಸರ್ಕಾರದಿಂದ ಮಂಜೂರಾದ ಜಮೀನುಗಳ ಸರ್ವೇ ಮತ್ತು ಹದ್ದುಬಸ್ತು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಆರಂಭಿಸಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ತಮ್ಮ ಸಮಸ್ಯೆಗಳ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಬೇಡಿಕೆಗಳು ಈಡೇರುವವರೆಗೂ ಕುಟುಂಬಸ್ಥರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಸುಂಕನೂರು ಸೀಮೆಯ ಸರ್ವೇ ನಂ.68 ಮತ್ತು 69ರ ಪಟ್ಟಾ ಭೂಮಿಯಲ್ಲಿ ಪಟ್ಟಾದಾರರಿಗೆ ಕಿರುಕುಳ ಹಾಗೂ ದೌರ್ಜನ್ಯ ನಡೆಸಿ ಜಮೀನು ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಪಟ್ಟಾದಾರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಜಮೀನಿಗೆ ಸಂಬಂಧಿಸಿದ ಕುಟುಂಬಗಳಿಗೆ ಜೀವಭಯವಿದ್ದು, ಪೊಲೀಸ್ ಇಲಾಖೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಹಾಲಾಪುರ ಹೋಬಳಿಯ ಗೋಗಿಬಾಳ ಸೀಮೆಯ ಸರ್ವೇ ನಂ.32 ಹಾಗೂ ತೋರಣದಿನ್ನಿ ಸೀಮೆಯ ಸರ್ವೇ ನಂ.115 ಮತ್ತು 116ರ ಜಮೀನುಗಳನ್ನು ಸರ್ಕಾರ ಮಾದಿಗ ಸಮುದಾಯದ ಫಲಾನುಭವಿಗಳಿಗೆ ಮಂಜೂರು ಮಾಡಿದ್ದು, ಜಮೀನಿನಲ್ಲಿ ಅನಧಿಕೃತವಾಗಿ ಇರುವವರನ್ನು ತೆರವುಗೊಳಿಸಿ, ಸರ್ವೇ ನಡೆಸಿ ಹದ್ದುಬಸ್ತು ಮಾಡಿಕೊಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಪಿಎಂಇಜಿಪಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೆಲವು ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತಿವೆ ಎಂದು ಆರೋಪಿಸಿರುವ ಸಮಿತಿ, ಅಂತಹ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಸರ್ಕಾರದಿಂದ ಭೂಮಿ ಮಂಜೂರಾಗಿದ್ದರೂ ಫಲಾನುಭವಿಗಳು ತಮ್ಮ ಜಮೀನಿನ ಹಕ್ಕನ್ನು ಅನುಭವಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸರ್ವೇ, ಹದ್ದುಬಸ್ತು ಹಾಗೂ ಅಗತ್ಯ ರಕ್ಷಣೆ ಒದಗಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.