ರಾಯಚೂರು, ಸೆ.22: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಅರ್ಹ ಮತದಾರರ ನೋಂದಣಿ ಪ್ರಕ್ರಿಯೆಯ ಅಂಗವಾಗಿ ವೇದಾಂತ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಮತ್ತು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಮನೆ ಮನೆಗೆ ತೆರಳಿ ಹೊಸ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲಾಯಿತು.

ಮಹಾವಿದ್ಯಾಲಯದ ಎನ್‌ಎಸ್‌ಎಸ್ ಸ್ವಯಂಸೇವಕರು 18 ವರ್ಷ ತುಂಬಿದ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ಮಾಹಿತಿ ನೀಡಿದರು. ಕರಪತ್ರಗಳನ್ನು ವಿತರಿಸಿ, ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಹಾಗೂ ಅಗತ್ಯ ದಾಖಲಾತಿಗಳ ಕುರಿತು ಕುಟುಂಬ ಸದಸ್ಯರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ ಪ್ರಾಚಾರ್ಯ ಡಾ. ತಿಮ್ಮಯ್ಯ ಶೆಟ್ಟಿ ಹಾಗೂ ಇಎಲ್‌ಸಿ ಸಂಯೋಜಕ ವರಮುನಿ, ಕಾಲೇಜಿನ ಸಮಯದ ನಂತರ ಸ್ವಯಂಸೇವಕರು ತಮ್ಮ ಬಡಾವಣೆಗಳು ಹಾಗೂ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸುವಂತೆ ಪ್ರೇರೇಪಿಸಿದರು. ಅದರಂತೆ ರಾಯಚೂರು ನಗರದ ವಿವಿಧ ಬಡಾವಣೆಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 200ರಿಂದ 250 ಮನೆಗಳಿಗೆ ಭೇಟಿ ನೀಡಿ ಹೊಸ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲಾಯಿತು.