ರಾಯಚೂರು: ಶ್ರೀ ಗೌರಿ-ಗಣೇಶ ಉತ್ಸವದ ಒಂಬತ್ತನೇ ದಿನ ನಡೆಯಲಿರುವ ಗಣೇಶ ಮೂರ್ತಿ ವಿಸರ್ಜನಾ ಸಮಾರಂಭದ ಸಿದ್ಧತೆಗಳ ಜೊತೆಗೆ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಗರ ಪಾಲಿಕೆ ಆಯುಕ್ತರು ಜುಬಿನ್ ಮಹಾಪಾತ್ರ ಪರಿಶೀಲಿಸಿದರು.
ನಗರದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದ ಆಯುಕ್ತರು, ಅಸ್ಕಿಹಾಳ್ನಿಂದ ಬೈಪಾಸ್ ರಸ್ತೆಯವರೆಗಿನ ಬೀದಿ ದೀಪಗಳ ಅಳವಡಿಕೆ ಕಾಮಗಾರಿಯನ್ನು ವೀಕ್ಷಿಸಿದರು. ಎರಡು ದಿನಗಳೊಳಗೆ ಎಲ್ಲ ಬೀದಿ ದೀಪಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
15ನೇ ಹಣಕಾಸು ಆಯೋಗದ ಅನುದಾನದಡಿ ಕೃಷ್ಣಾ ನದಿಯ ಜಾಕ್ವೆಲ್ ವಿಭಾಗದಲ್ಲಿ ನಡೆಯುತ್ತಿರುವ ಸೇತುವೆ ಬಲವರ್ಧನೆ ಕಾಮಗಾರಿಯನ್ನೂ ಪರಿಶೀಲಿಸಿದರು. ಸುಮಾರು ₹90 ಲಕ್ಷ ವೆಚ್ಚದಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿ ಪಾಲಿಕೆಯ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಮಾವಿನಕೆರೆ ಉದ್ಯಾನವನ ಯೋಜನೆಯ ಪ್ರಗತಿ, ಸುಮಾರು ₹8 ಕೋಟಿ ವೆಚ್ಚದ ‘ನೀರು ಭಾವಿ ಕುಂಟೆ’ ಯೋಜನೆ ಹಾಗೂ ವಾರ್ಡ್ ಸಂಖ್ಯೆ 24ರಲ್ಲಿ ನಿರ್ಮಿಸಲಾಗುತ್ತಿರುವ 45 ಆಸನಗಳ ಸಾಮರ್ಥ್ಯದ ಸಾರ್ವಜನಿಕ ಶೌಚಾಲಯ ಕಾಮಗಾರಿಯನ್ನೂ ವೀಕ್ಷಿಸಿದರು.
ಪಾಲಿಕೆಯಿಂದ ವಾರ್ಡ್ ಸಂಖ್ಯೆ 17, 19 ಹಾಗೂ 21ರಲ್ಲಿ ನಿರ್ಮಿಸಲಾಗುತ್ತಿರುವ ಮೂರು ನೂತನ ಅಂಗನವಾಡಿ ಕೇಂದ್ರಗಳ ಕಾಮಗಾರಿ ಸ್ಥಳಗಳಿಗೂ ಭೇಟಿ ನೀಡಿ, ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು. ಎಲ್ಲ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ಅನಗತ್ಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶ್ರೀ ಗೌರಿ-ಗಣೇಶ ಉತ್ಸವದ ಒಂಬತ್ತನೇ ದಿನ ಸಂಜೆ ನಡೆಯಲಿರುವ ವಿಸರ್ಜನಾ ಮೆರವಣಿಗೆಗೆ ಅಗತ್ಯ ಆಡಳಿತಾತ್ಮಕ ಸಿದ್ಧತೆಗಳನ್ನು ಪರಿಶೀಲಿಸಲು ಆಯುಕ್ತರು ವಲಯ ಆಯುಕ್ತರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳೊಂದಿಗೆ ‘ಖಾಸ್ ಭಾವಿ’ ಮತ್ತು ವಿಸರ್ಜನಾ ಮೆರವಣಿಗೆಯ ಮಾರ್ಗಗಳಿಗೆ ಭೇಟಿ ನೀಡಿದರು.
ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಸಂಚಾರ ವ್ಯವಸ್ಥೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ಉಪಸ್ಥಿತರಿದ್ದರು.



