ರಾಯಚೂರು: ಶ್ರೇಷ್ಠ ಹರಿದಾಸರಾದ ಶ್ರೀ ಜಗನ್ನಾಥದಾಸರು ದಾಸ ಚತುಷ್ಟಯರಲ್ಲಿ ಒಬ್ಬರಾಗಿದ್ದು, ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.

ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶ್ರೀ ಜಗನ್ನಾಥದಾಸರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಂದರದಾಸರು, ವಿಜಯದಾಸರು ಹಾಗೂ ಗೋಪಾಲದಾಸರ ನಂತರ ಹರಿದಾಸ ಪರಂಪರೆಯನ್ನು ಸಮೃದ್ಧಗೊಳಿಸಿದ ಜಗನ್ನಾಥದಾಸರು ತಮ್ಮ ಕೃತಿಗಳ ಮೂಲಕ ಭಕ್ತಿ ಮತ್ತು ತತ್ವಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅವರು ರಚಿಸಿದ ‘ಹರಿಕಥಾಮೃತಸಾರ’ ಅತ್ಯಂತ ಮೌಲ್ಯಯುತ ಕೃತಿಯಾಗಿದ್ದು, ವೇದ, ಉಪನಿಷತ್ತು, ಸ್ಮೃತಿ, ಪುರಾಣ, ಭಾಗವತ, ಮಹಾಭಾರತ ಹಾಗೂ ರಾಮಾಯಣದಲ್ಲಿನ ತತ್ವಗಳನ್ನು ಒಳಗೊಂಡ ಸಾಧನಾ ಕೃತಿಯಾಗಿದೆ. ಹರಿನಾಮ ಸ್ಮರಣೆಯ ಮೂಲಕ ಜಗತ್ತಿಗೆ ಭಕ್ತಿಯ ಬೆಳಕನ್ನು ತೋರಿಸಿದ ಹರಿದಾಸ ಶ್ರೇಷ್ಠರು ಜಗನ್ನಾಥದಾಸರು ಎಂದು ಮುರಳಿಧರ ಕುಲಕರ್ಣಿ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ, ಜಗನ್ನಾಥದಾಸರು ಹರಿದಾಸ ಪರಂಪರೆಯ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದಾರೆ. ‘ಹರಿಕಥಾಮೃತಸಾರ’ದ ಜೊತೆಗೆ ನೂರಾರು ಸಂಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು ಹಾಗೂ ತತ್ವಸುವ್ವಾಲಿಗಳನ್ನು ರಚಿಸುವ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣ ಸಮಾಜದ ಮುಖಂಡ ಪ್ರಸನ್ನ ಅಲಂಪಲ್ಲಿ ಅವರು ಶ್ರೀ ಜಗನ್ನಾಥದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಯಕ ಸುರೇಶ್ ಕಲ್ಲೂರು ಅವರು ಜಗನ್ನಾಥದಾಸರು ರಚಿಸಿದ ಕೀರ್ತನೆಯನ್ನು ಹಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಬಯಲು ಆಂಜನೇಯ ದೇವಸ್ಥಾನದ ಅರ್ಚಕ ಶ್ರೀಧರಾಚಾರ್ಯ ಮುಂಗಲಿ ಅವರು ಜಗನ್ನಾಥದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.