ರಾಯಚೂರು, ಸೆ.24: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಭಾವೈಕ್ಯತೆ ಮತ್ತು ಸಹಬಾಳ್ವೆಯನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ. ಚೆನ್ನಪ್ಪ ಕೆಎಎಸ್ ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ದಿನಾಚರಣೆಯಲ್ಲಿ ವಿಕಸಿತ ಭಾರತ್ ರಸಪ್ರಶ್ನೆ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ, ಸ್ವಯಂಸೇವಕರಿಗೆ ಎನ್ಎಸ್ಎಸ್ ಬ್ಯಾಡ್ಜ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿ ಮತ್ತು ಮನುಷ್ಯನ ಅಸ್ತಿತ್ವ ಇರುವವರೆಗೂ ಸೇವೆ ಎಂಬ ಪರಿಕಲ್ಪನೆ ಅಸ್ತಿತ್ವದಲ್ಲಿರುತ್ತದೆ. ತನಗಾಗಿ ಮಾಡುವುದಕ್ಕಿಂತ ಇತರರಿಗಾಗಿ ಮಾಡುವ ಸೇವೆಯೇ ನಿಜವಾದ ರಾಷ್ಟ್ರಸೇವೆ. ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡರೆ ಆತ್ಮತೃಪ್ತಿ ದೊರೆಯುತ್ತದೆ. ರಾಷ್ಟ್ರಸೇವೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ಮನೋಭಾವ ಮುಖ್ಯ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಚ್ಛತೆಯ ಕುರಿತು ಜನರಿಗೆ ಅರಿವು ಮೂಡಿಸಿ, ಅವರೊಂದಿಗೆ ಕೈಜೋಡಿಸಿ ಪರಿಸರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು. ಮಹಾತ್ಮ ಗಾಂಧೀಜಿಯವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿಕೊಂಡು ಅವರ ಹಾದಿಯಲ್ಲಿ ಸಾಗುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಜಿ.ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದೊಂದಿಗೆ ಸೇವೆ ಹಾಗೂ ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಎಂಬ ಧ್ಯೇಯಗಳೊಂದಿಗೆ ಗಾಂಧೀಜಿಯವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 1969ರ ಸೆ.24ರಂದು ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನಗೊಂಡಿತು. ಎನ್ಎಸ್ಎಸ್ ಯುವಕರಲ್ಲಿ ಶಿಸ್ತು, ಸಮಯಪಾಲನೆ, ಬದ್ಧತೆ ಸೇರಿದಂತೆ ಜೀವನ ಮೌಲ್ಯಗಳನ್ನು ಬೆಳೆಸುತ್ತದೆ. ತಾವು ಪಡೆದ ಶಿಕ್ಷಣ ಮತ್ತು ಅನುಭವವನ್ನು ಸಮಾಜ ಹಾಗೂ ಸಮುದಾಯದ ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಪಾರ್ವತಿ ಸಿ.ಎಸ್., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸ್ವಯಂಸೇವಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ಎಸ್ಎಸ್ ಘಟಕದ ಅಧಿಕಾರಿ ಅನಿಲ್ ಅಪ್ರಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ. ಮಂಜುನಾಥ ಕೆ. ವಂದಿಸಿದರು.



