ಮಾನ್ವಿ: ಪಟ್ಟಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ಗುಂಪು ಕ್ರೀಡೆಗಳಲ್ಲಿ ಕಾಲೇಜಿನ ತಂಡ ಥ್ರೋಬಾಲ್ ಹಾಗೂ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಖೋ-ಖೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.

ವೈಯಕ್ತಿಕ ವಿಭಾಗದಲ್ಲಿ ಮಲ್ಲು 100 ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 3000 ಮೀಟರ್ ಓಟದಲ್ಲಿ ಮಲ್ಲಯ್ಯ ಪ್ರಥಮ ಸ್ಥಾನ, 1500 ಮೀಟರ್ ಓಟದಲ್ಲಿ ದೇವರಾಜ ಪ್ರಥಮ ಹಾಗೂ ರವಿಕುಮಾರ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ರಿಂಗ್‌ಬಾಲ್ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಭಿನಂದಿಸಿ, ಮುಂದಿನ ಹಂತದಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ, ಪ್ರಾಚಾರ್ಯ ಎಸ್.ಎಸ್. ಪಾಟೀಲ್, ಕ್ರೀಡಾ ಸಂಚಾಲಕ ವಿರುಪಣ್ಣ ಪಾಟೀಲ್, ಮಲ್ಲಿಕಾರ್ಜುನ, ದುರ್ಗಾ, ನಾಗರಾಜ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.