ರಾಯಚೂರು ಸೆಪ್ಟಂಬರ್ 24 (ಕರ್ನಾಟಕ ವಾರ್ತೆ): 2018ರ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆ ಪಟ್ಟಿಯಿಂದ ಹೊರಗುಳಿದಿರುವ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳನ್ನು ಸಮೀಕ್ಷೆ ಪಟ್ಟಿಗೆ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಫಲಾನುಭವಿಗಳು 2026ರ ಸೆಪ್ಟೆಂಬರ್ 30ರೊಳಗಾಗಿ ಸಂಬAಧಪಟ್ಟ ಗ್ರಾಮ ಪಂಚಾಯತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ತಿಳಿಸಿದ್ದಾರೆ. ಗ್ರಾಮೀಣ ಆಶ್ರಯ ನಿವೇಶನ ಯೋಜನೆ ಹಾಗೂ ಗ್ರಾಮೀಣ ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ನಿವೇಶನ ರಹಿತ ಹಾಗೂ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನ ಒದಗಿಸುವ ಉದ್ದೇಶ ಹೊಂದಲಾಗಿದೆ. ಅರ್ಹತೆಗಳು: ಅರ್ಜಿದಾರರು ಮಹಿಳೆಯಾಗಿರಬೇಕು. ವಿವಾಹಿತ ಅಥವಾ ಅವಿವಾಹಿತ ಮುಖ್ಯಸ್ಥರು/ಗ್ರಹಿಣಿಯರು ಅರ್ಹರಾಗಿರುತ್ತಾರೆ. ಮಾಜಿ ಸೈನಿಕರು, ವಿಧುರರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿದ್ದಲ್ಲಿ ಪುರುಷರೂ ಅರ್ಹರಾಗಿರುತ್ತಾರೆ. ಅರ್ಜಿದಾರರು ಸಂಬAಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಕುಟುಂಬವು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರಬೇಕು ಮತ್ತು ವಾರ್ಷಿಕ ಆದಾಯ 1,20,000 ರೂ. ಗಿಂತ ಕಡಿಮೆ ಇರಬೇಕು. ಅರ್ಜಿದಾರರ ಕುಟುಂಬವು ವಸತಿ ಹಾಗೂ ನಿವೇಶನ ರಹಿತವಾಗಿರಬೇಕು. ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನ ಇರಬಾರದು ಜೊತೆಗೆ ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ವಸತಿ ಅಥವಾ ನಿವೇಶನ ಸೌಲಭ್ಯ ಪಡೆದಿರಬಾರದು. ಅರ್ಹ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



