ಹುಬ್ಬಳ್ಳಿ: ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಚುರುಕು ನೀಡುವ ಸಂಬಂಧ ಸಂಸದ ಜಿ. ಕುಮಾರ ನಾಯಕ ಅವರು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಹೊಸ ಮಾರ್ಗಗಳ ಸಮೀಕ್ಷೆ ಸೇರಿದಂತೆ ಹಲವು ವಿಷಯಗಳನ್ನು ಸಂಸದರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.

ರಾಯಚೂರು–ಗಿಣಿಗೇರಾ ರೈಲು ಮಾರ್ಗದ ಪ್ರಸ್ತುತ ಕಾಮಗಾರಿಯ ಸ್ಥಿತಿಗತಿ ಕುರಿತು ಮಾಹಿತಿ ಪಡೆದ ಅವರು, ಬಾಕಿ ಉಳಿದಿರುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಇದೇ ವೇಳೆ ಗದಗ–ವಾಡಿ ರೈಲು ಮಾರ್ಗದ ಕಾಮಗಾರಿಗೂ ಹೆಚ್ಚಿನ ಆದ್ಯತೆ ನೀಡಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರಸ್ತಾವಿತ ಆಲಮಟ್ಟಿ–ಯಾದಗಿರಿ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (FLS) ಕಾರ್ಯವನ್ನು ಗುತ್ತಿಗೆದಾರರ ಮೂಲಕ ಶೀಘ್ರ ಆರಂಭಿಸುವ ಅಗತ್ಯವಿದೆ ಎಂದು ಸಂಸದರು ಪ್ರತಿಪಾದಿಸಿದರು. ಈ ಯೋಜನೆಯ ಮುಂದಿನ ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳಿಗೆ ವೇಗ ನೀಡುವಂತೆಯೂ ಅಧಿಕಾರಿಗಳಿಗೆ ಮನವಿ ಮಾಡಿದರು.

ಇದರೊಂದಿಗೆ ರೈಲ್ವೆ ಗೂಡ್ಸ್‌ಶೆಡ್ ಸ್ಥಳಾಂತರದ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿತು. ಗೂಡ್ಸ್‌ಶೆಡ್ ಸ್ಥಳಾಂತರದಿಂದ ರೈಲ್ವೆ ಕಾರ್ಯಾಚರಣೆ, ಸರಕು ಸಾಗಣೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಆಗಬಹುದಾದ ಪರಿಣಾಮಗಳ ಕುರಿತು ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು.

ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬವಾಗದಂತೆ ನಿಯಮಿತ ಮೇಲ್ವಿಚಾರಣೆ ನಡೆಸಬೇಕು. ಯೋಜನೆಗಳಿಗೆ ಸಂಬಂಧಿಸಿದ ಅನುಮೋದನೆ, ತಾಂತ್ರಿಕ ಪ್ರಕ್ರಿಯೆ ಹಾಗೂ ಇತರ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ಕುಮಾರ ನಾಯಕ ಕೋರಿದರು.

ಸಭೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳಿಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದು, ವಿವಿಧ ಯೋಜನೆಗಳ ಕಾಮಗಾರಿಗೆ ಚುರುಕು ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರಾಯಚೂರು ಮತ್ತು ಯಾದಗಿರಿ ಭಾಗದಲ್ಲಿ ರೈಲ್ವೆ ಸಂಪರ್ಕ ವಿಸ್ತರಣೆಯಿಂದ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರೆಯುವುದರ ಜತೆಗೆ ಕೃಷಿ ಉತ್ಪನ್ನಗಳ ಸಾಗಣೆ, ಕೈಗಾರಿಕೆ ಮತ್ತು ವ್ಯಾಪಾರ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಪ್ರಮುಖ ರೈಲ್ವೆ ಯೋಜನೆಗಳು ಪೂರ್ಣಗೊಂಡರೆ ಈ ಭಾಗದ ಆರ್ಥಿಕ ಚಟುವಟಿಕೆ ಹಾಗೂ ಉದ್ಯೋಗಾವಕಾಶಗಳ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬಾಕಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲು ಪ್ರಯತ್ನ ಮುಂದುವರಿಸಲಾಗುವುದು ಎಂದು ಜಿ. ಕುಮಾರ ನಾಯಕ ತಿಳಿಸಿದರು.

ಸಭೆಯಲ್ಲಿ ಎಜಿಎಂ ಶ್ರೀನಿವಾಸ್, ಪ್ರಿನ್ಸಿಪಲ್ ಚೀಫ್ ಆಪರೇಷನ್ಸ್ ಆಫೀಸರ್ ಬಾಲಾಜಿ ಅರುಣ್‌ಕುಮಾರ್, ಪ್ರಿನ್ಸಿಪಲ್ ಚೀಫ್ ಎಂಜಿನಿಯರ್ ಸುನಿಲ್ ಎನ್. ಮಾಸ್ಕೆ ಹಾಗೂ ಡಿಆರ್‌ಎಂ ಬೇಲಾ ಮೀನಾ ಉಪಸ್ಥಿತರಿದ್ದರು.