ಮಂತ್ರಾಲಯ: ಪವಿತ್ರ ಅನಂತ ಚತುರ್ದಶಿ ಅಂಗವಾಗಿ ಮಂತ್ರಾಲಯದ ಶ್ರೀಮಠದಲ್ಲಿ ಭಕ್ತಿಭಾವ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಅನಂತ ಚತುರ್ದಶಿ ವ್ರತಾಚರಣೆ ನೆರವೇರಿತು.

ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮೂಲ ರಾಮದೇವರ ಪೂಜೆಯ ಸಂದರ್ಭದಲ್ಲಿ ಅನಂತ ಚತುರ್ದಶಿ ವ್ರತವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಈ ವೇಳೆ ಶ್ರೀಮೂಲ ರಾಮದೇವರು ಸೇರಿದಂತೆ ಶ್ರೀಮಠದ ಆರಾಧ್ಯ ದೇವರಿಗೆ ವಿಶೇಷ ಪೂಜೆ, ಅರ್ಚನೆ ಹಾಗೂ ಮಂಗಳಾರತಿ ಸಲ್ಲಿಸಲಾಯಿತು.

ಅನಂತ ಚತುರ್ದಶಿಯ ಪವಿತ್ರ ದಿನದ ಅಂಗವಾಗಿ ಶ್ರೀಪಾದಂಗಳವರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಲೋಕಕಲ್ಯಾಣ ಹಾಗೂ ಸಕಲ ಭಕ್ತರ ಸುಖ-ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ಶ್ರೀಮಠದ ಆವರಣದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ವಾತಾವರಣ ಮನೆಮಾಡಿದ್ದು, ಪೂಜಾ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.

ಶ್ರೀಮೂಲ ರಾಮದೇವರ ಪೂಜೆ ಹಾಗೂ ಅನಂತ ಚತುರ್ದಶಿ ವ್ರತಾಚರಣೆಯನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ದೇವರ ದರ್ಶನ ಹಾಗೂ ಶ್ರೀಪಾದಂಗಳವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿಗಳು, ಸಿಬ್ಬಂದಿ, ಪಂಡಿತರು, ಅರ್ಚಕರು ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.