ಸಿರವಾರ: ತಾಲೂಕಿನ ತುಪ್ಪದೂರು ಕೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಟ್ರಸ್ಟ್‌ನ ಗೌರವಾಧ್ಯಕ್ಷ ಆನಂದಪ್ಪ ಮಾಡಗಿರಿ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇಂದು ನೆಡುವ ಪ್ರತಿಯೊಂದು ಸಸಿಯೂ ಭವಿಷ್ಯದಲ್ಲಿ ಶುದ್ಧ ಗಾಳಿ, ನೆರಳು ಹಾಗೂ ಆರೋಗ್ಯಕರ ವಾತಾವರಣವನ್ನು ಒದಗಿಸುತ್ತದೆ. ಕೇವಲ ಸಸಿ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ನೆಟ್ಟ ಸಸಿಗಳನ್ನು ನಿರಂತರವಾಗಿ ಪೋಷಿಸಿ, ಮರಗಳಾಗಿ ಬೆಳೆಸುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಹಸಿರು ಪರಿಸರ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿಯೂ ಪರಿಸರದ ಮಹತ್ವ ಹಾಗೂ ಗಿಡಮರಗಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಲಿಂಗ ನಾಯಕ, ಗ್ರಾಮದ ಹಿರಿಯರಾದ ಮಲ್ಲಣ್ಣ ಆಚಾರ್ಯ, ಪಂಪಣ್ಣ ನಾಯಕ, ಭೀಮಯ್ಯ ಛಲವಾದಿ, ಪ್ರಗತಿಪರ ರೈತ ಮುಖಂಡರಾದ ಇಟ್ಟೋಬ, ಯಲ್ಲಪ್ಪ ನಾಯಕ, ಬಸನಗೌಡ ನಾಯಕ, ಅತಿಥಿ ಶಿಕ್ಷಕ ಕೆ. ಶಿವಪ್ಪ ನಾಯಕ ಕಲ್ಲೂರು ಸೇರಿದಂತೆ ಶಾಲೆಯ ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.