ಮಾನ್ವಿ: ರಾಜ್ಯ ಸರ್ಕಾರ ಸಂಪೂರ್ಣ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಅವರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆರೋಪಿಸಿದರು.

ಪಟ್ಟಣದ ಬಸವ ವೃತ್ತದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಮಾನ್ವಿ ತಾಲೂಕು ಘಟಕದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಬರಗಾಲದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಕಾಲುವೆ ನೀರು ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ರೈತರು ಬೆಳೆದ ಜೋಳವನ್ನು ಸರ್ಕಾರಕ್ಕೆ ನೀಡಿ ಒಂದು ವರ್ಷ ಕಳೆದರೂ ಹಣ ರೈತರ ಖಾತೆಗೆ ಜಮೆಯಾಗಿಲ್ಲ. ಹಣ ಪಾವತಿಸುವಂತೆ ಕೇಳಲು ಹೋದ ರೈತರ ಮೇಲೆ ದೌರ್ಜನ್ಯ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಕೂಡಲೇ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಅವರ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಜಾನುವಾರುಗಳಿಗಾಗಿ ಗೋಶಾಲೆ ಆರಂಭಿಸಿ ಮೇವು, ಕುಡಿಯುವ ನೀರು ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಬರ ಪರಿಹಾರ ನಿಧಿ ಪಡೆಯಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬೆಳೆ ಹಾನಿ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಗ್ರಾಮೀಣ ಪ್ರದೇಶದ ಭೂಕಂದಾಯ ಮನ್ನಾ ಮಾಡುವುದರೊಂದಿಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡ ರೈತರಿಗೆ ವಿಮಾ ಕಂಪನಿಗಳಿಂದ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರದ ತುರ್ತು ಪ್ರಕೃತಿ ವಿಕೋಪ ಪರಿಹಾರ ನಿಧಿಗಾಗಿ ಕಾಯದೆ ರಾಜ್ಯ ಸರ್ಕಾರವೇ ಎಲ್ಲ ಜಿಲ್ಲಾಧಿಕಾರಿಗಳಿಗೆ ತಲಾ ₹50 ಕೋಟಿ ಅನುದಾನವನ್ನು ಬರಗಾಲ ನಿರ್ವಹಣೆಗಾಗಿ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಜೆಡಿಎಸ್ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಜೆಡಿಎಸ್ ಕಾರ್ಯಕರ್ತರು ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಬಳಿಕ ನೂರಾರು ಕಾರ್ಯಕರ್ತರು ಎತ್ತಿನಗಾಡಿಯೊಂದಿಗೆ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವ ಮನವಿ ಪತ್ರವನ್ನು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಡಾ. ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟ್ಟಗಿ, ತಾಲೂಕು ರೈತ ಘಟಕದ ಅಧ್ಯಕ್ಷ ಶರಣಪ್ಪಗೌಡ ಮದ್ಲಾಪುರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸರ್ವಮಂಗಳ, ವಿಜಯಲಕ್ಷ್ಮೀ, ರಾಜಶೇಖರ ತಪ್ಪಲದೊಡ್ಡಿ, ಖಾಜಾಸಾಬ್, ನಾಗರಾಜ ಭೋಗವತಿ, ಲೋಕರೆಡ್ಡಿ, ಜಂಭೂನಾಥ ಯಾದವ್, ರವಿಕುಮಾರ ವಕೀಲರು, ಎಚ್. ಮೌನೇಶಗೌಡ, ದಾನಪ್ಪ ಸಿರವಾರ, ರಂಜೀತಕುಮಾರ, ಮಲ್ಲಪ್ಪ ಹೂಗಾರ, ವಿಜಯ ನಾಯಕ, ಬಾಷಾ ಸಾಬ್, ಶರಣಪ್ಪ ಮೇದಾ, ಜೆ.ಎಚ್. ದೇವರಾಜ, ರಾಜಾ ಆದರ್ಶನಾಯಕ, ವೆಂಕಟೇಶನಾಯಕ, ಎಂ.ಡಿ. ಉಸ್ಮಾನ್ ಸಾಬ್, ಎಂ. ಪ್ರಕಾಶ, ಬಸವನಗೌಡ ಅತ್ತನೂರು, ರುಕ್ಮುದ್ದೀನ್, ಸಣ್ಣ ಕರಿಲಿಂಗಪ್ಪ, ರಾಮಚಾರಿ, ಯಲ್ಲಪ್ಪ ನಾಯಕ, ಅಳ್ಳಪ್ಪನಾಯಕ ಜುಲ್ಪಿ, ಖಾಸಿಂಸಾಬ್, ಸುಭಾನ್ ಬೇಗ್, ಜಸ್ವಂತ್ ಸೇಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.