ರಾಯಚೂರು: ನಗರದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಯಚೂರು ಗ್ರಾಮಾಂತರ ಛಾಯಾಗ್ರಾಹಕರ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಸಂಭ್ರಮದಿಂದ ಚಾಲನೆ ನೀಡಲಾಯಿತು.
ನಗರಾಧ್ಯಕ್ಷ ಅಕ್ಬರ್ ಪಾಷಾ ಅಧ್ಯಕ್ಷತೆಯಲ್ಲಿ, ಶಂಕರ ಪಾಟೀಲ, ಜಗದೀಶ, ವೀರೇಶ, ಗಜೇಂದ್ರ ಹಾಗೂ ಮೌಲಾಲಿ ಅವರ ನೇತೃತ್ವದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಗೌಡ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ, ವೇದಿಕೆಯಲ್ಲಿ ಕ್ರಿಕೆಟ್ ಕಪ್ಗಳನ್ನು ಅನಾವರಣಗೊಳಿಸಿದರು. ಬಳಿಕ ಮೈದಾನದಲ್ಲಿ ರಿಬ್ಬನ್ ಕತ್ತರಿಸಿ ಬ್ಯಾಟ್ ಬೀಸುವ ಮೂಲಕ ಪಂದ್ಯಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ಪಿ. ರಾಧಾಕೃಷ್ಣರೆಡ್ಡಿ, ಸಾಯಿ ಇಂಡಸ್ಟ್ರೀಸ್ನ ಕೆ. ವಿಕ್ರಂ, ಡಿ. ರಾಂಪೂರ, ಕೊರ್ತಕುಂದ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಪ್ಪ, ಎ. ಧರ್ಮರೆಡ್ಡಿ ಆರ್.ಪಿ., ಹಿರಿಯ ಛಾಯಾಗ್ರಾಹಕರಾದ ತಾರಾ ಪ್ರಕಾಶ, ಶ್ರೀನಿವಾಸ ಇನಾಮದಾರ, ಹರೀಶ ಜಾದವ ವಜ್ರ, ಎನ್. ನರಸಪ್ಪ, ಮುದೀರ ಪಾಷಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿದ್ದ ಅಕ್ಬರ್ ಪಾಷಾ ಮಾತನಾಡಿ, ನಿತ್ಯ ವಿವಿಧ ಕಾರ್ಯಕ್ರಮಗಳ ಛಾಯಾಗ್ರಹಣಕ್ಕಾಗಿ ನಿರಂತರವಾಗಿ ಓಡಾಡುವ ಛಾಯಾಗ್ರಾಹಕರಿಗೆ ಕ್ರೀಡಾ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿವೆ. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದ ಛಾಯಾಗ್ರಾಹಕರ ನಡುವೆ ಪರಸ್ಪರ ಪರಿಚಯ ಮತ್ತು ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ. ವೃತ್ತಿಪರ ಸಂಪರ್ಕ ವಿಸ್ತರಣೆಯ ಮೂಲಕ ವ್ಯವಹಾರಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಛಾಯಾಗ್ರಾಹಕ ಹಾಗೂ ವಕೀಲ ವೀರಪ್ರಕಾಶ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಗೆಲುವಿಗಿಂತ ಪಂದ್ಯಾವಳಿಯಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಹಿರಿಯ ಪತ್ರಿಕಾ ಛಾಯಾಗ್ರಾಹಕ ಶ್ರೀನಿವಾಸ ಇನಾಮದಾರ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಿಂದ ಡಿಜಿಟಲ್ ಕ್ಯಾಮೆರಾಗಳು ಹಾಗೂ ಹೈಡೆಫಿನಿಷನ್ ಮೊಬೈಲ್ಗಳು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ವೃತ್ತಿಪರ ಛಾಯಾಗ್ರಾಹಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅನೇಕ ಸಂಕಷ್ಟಗಳ ನಡುವೆಯೂ ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಹಲವು ವರ್ಷಗಳ ಹೋರಾಟದ ಬಳಿಕ ಸರ್ಕಾರದಿಂದ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ಕ್ರಿಕೆಟ್ ಪ್ರಮುಖ ಕ್ರೀಡೆಯಾಗಿ ಬೆಳೆದಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಛಾಯಾಗ್ರಾಹಕರು ಸಹೋದರತ್ವ ಹಾಗೂ ಸೌಹಾರ್ದತೆಯಿಂದ ಆಟವಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು. ಇಂತಹ ಪಂದ್ಯಾವಳಿಗಳು ಪರಸ್ಪರ ಪರಿಚಯ ಬೆಳೆಸುವುದರೊಂದಿಗೆ ವೃತ್ತಿಪರ ಸಂಪರ್ಕ ವಿಸ್ತರಣೆಗೆ ಸಹಕಾರಿಯಾಗುತ್ತವೆ ಎಂದರು.
ಒಟ್ಟು 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ತಲಾ 8 ಓವರ್ಗಳ ಪಂದ್ಯಗಳು ನಡೆಯಲಿವೆ. ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಛಾಯಾಗ್ರಾಹಕರು ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹಿರಿಯ ಮತ್ತು ಕಿರಿಯ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



