ರಾಯಚೂರು: ದೇಶದ ಏಕತೆ, ಸಮಗ್ರತೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಯುವ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಸಮಾನತೆಯ ಯುಗದಲ್ಲಿ ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದು ಶ್ರೀ ರಾಮಕೃಷ್ಣ ಪರಮಹಂಸ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಆಂಜನೇಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ಸೇವಾ ಮನೋಭಾವ ಮತ್ತು ವ್ಯಕ್ತಿತ್ವ ವಿಕಾಸಕ್ಕೂ ಆದ್ಯತೆ ನೀಡಬೇಕು. ಕಾಲೇಜಿನ ವಿದ್ಯಾರ್ಥಿನಿಯರು ಎನ್ಎಸ್ಎಸ್ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಮಟಮಾರಿಯ ಶ್ರೀ ಮಹಾಂತೇಶ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಹಿರೇದೊಡ್ಡಿ ಮಾತನಾಡಿ, ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಎನ್ಎಸ್ಎಸ್ ಮೂಲಕ ನಾಯಕತ್ವ ಮತ್ತು ಸೇವಾ ಸಾಮರ್ಥ್ಯ ಬೆಳೆಸುವಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಉತ್ತಮ ಕಾರ್ಯ ಮಾಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಹಲವು ಅವಕಾಶಗಳನ್ನು ಎನ್ಎಸ್ಎಸ್ ಕಲ್ಪಿಸುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸುಗುಣಾ ಬಸವರಾಜ್ ಮಾತನಾಡಿ, ಎನ್ಎಸ್ಎಸ್ ಸಂಸ್ಥಾಪನಾ ದಿನವು ಸೇವೆಯ ಸಾರ್ಥಕತೆಯನ್ನು ಸ್ಮರಿಸುವುದರ ಜೊತೆಗೆ ನಮ್ಮ ಜವಾಬ್ದಾರಿಗಳನ್ನು ಮನನ ಮಾಡಿಕೊಳ್ಳುವ ದಿನವಾಗಿದೆ. ಹಿಂದಿನ ಸೇವಾ ಚಟುವಟಿಕೆಗಳ ಅನುಭವದ ಆಧಾರದಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸಿಕೊಂಡು ಕಿರಿಯ ವಿದ್ಯಾರ್ಥಿನಿಯರನ್ನು ಪ್ರೇರೇಪಿಸುವುದು ಇದರ ಉದ್ದೇಶ ಎಂದು ಹೇಳಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಸೆ.24ರಂದು ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಕಾಲೇಜಿನ ಎನ್ಎಸ್ಎಸ್ ಘಟಕವು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಘಟಕದ ಹಿನ್ನೆಲೆ, ಸಾಧನೆ, ಕಾರ್ಯಚಟುವಟಿಕೆಗಳು ಹಾಗೂ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಎನ್ಎಸ್ಎಸ್ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಿ ಉನ್ನತ ಶಿಕ್ಷಣ ಪೂರೈಸಿ ಪ್ರಸ್ತುತ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಹೂಗಾರ ಹಾಗೂ ಉಪನ್ಯಾಸಕಿ ಶ್ರೀದೇವಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಕ ವೀರಭದ್ರಪ್ಪ, ಸಿಬ್ಬಂದಿ ಕಾರ್ಯದರ್ಶಿ ಡಾ. ಎಸ್.ಆರ್. ಪರ್ವೀನ್, ಐಕ್ಯೂಎಸಿ ಸಹ ಸಂಯೋಜಕ ಶರಣಗೌಡ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಂಗೀತಾ ವಿ. ನಿರೂಪಿಸಿದರು, ಜಮುನಾ ಪ್ರಾರ್ಥಿಸಿದರು, ಜಮುಲಮ್ಮ ಸ್ವಾಗತಿಸಿ, ಅನ್ನಪೂರ್ಣಾ ವಂದಿಸಿದರು.



