ರಾಯಚೂರು: ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ನೈಜ ನಷ್ಟಕ್ಕೆ ಅನುಗುಣವಾಗಿ ಸಮರ್ಪಕ ಪರಿಹಾರ ನೀಡುವುದರ ಜೊತೆಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಿದ್ಯಾರ್ಥಿ ಸಂಘದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಜಿ.ಎನ್.ಎಸ್. ಗೌಡ ಒತ್ತಾಯಿಸಿದ್ದಾರೆ.

ಬರದಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣ ಮತ್ತು ಕೂಲಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೀಡುತ್ತಿರುವ ₹2,500 ಬರ ಪರಿಹಾರ ರೈತರು ಅನುಭವಿಸಿರುವ ಬೆಳೆ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಬೆಳೆ ಬೆಳೆಯಲು ರೈತರು ಬೀಜದಿಂದ ಹಿಡಿದು ಕೊಯ್ಲಿನವರೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಸಾಲ ಮಾಡಿ ಕೃಷಿಯಲ್ಲಿ ಹಣ ಹೂಡಿಕೆ ಮಾಡಿದ ಬಳಿಕ ಮಳೆ ಕೈಕೊಟ್ಟರೆ ಬೆಳೆ ಮಾತ್ರವಲ್ಲದೆ ಹೂಡಿಕೆ ಮಾಡಿದ ಹಣವೂ ಕೈತಪ್ಪುತ್ತದೆ. ಇದರಿಂದ ಕೃಷಿಗಾಗಿ ಪಡೆದ ಸಾಲ ಮತ್ತು ಅದರ ಬಡ್ಡಿಯ ಹೊರೆ ರೈತರ ಮೇಲೆಯೇ ಉಳಿಯುತ್ತದೆ. ಹೀಗಿರುವಾಗ ಅಲ್ಪ ಪ್ರಮಾಣದ ಪರಿಹಾರದಿಂದ ರೈತ ಕುಟುಂಬಗಳ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಬರಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೂಡಲೇ ಸಮಗ್ರ ಬೆಳೆ ನಷ್ಟ ಸಮೀಕ್ಷೆ ನಡೆಸಬೇಕು. ರೈತರು ವಾಸ್ತವವಾಗಿ ಅನುಭವಿಸಿರುವ ನಷ್ಟವನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಬೆಳೆ ಕಳೆದುಕೊಂಡು ಸಾಲ ಮರುಪಾವತಿಸಲು ಸಾಧ್ಯವಾಗದ ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಮೂಲಕ ಬಡ್ಡಿ ಮತ್ತು ಮರುಪಾವತಿಯ ಒತ್ತಡದಿಂದ ಅವರನ್ನು ಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಳೆ ವಿಮೆ ಪರಿಹಾರ ಅರ್ಹ ರೈತರಿಗೆ ವಿಳಂಬವಿಲ್ಲದೆ ತಲುಪುವಂತೆ ಕ್ರಮ ವಹಿಸಬೇಕು. ಬರದ ಪರಿಣಾಮ ಜಾನುವಾರುಗಳ ಮೇಲೂ ಬೀರುವುದರಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡುವುದರೊಂದಿಗೆ ಕೃಷಿ ಸಾಮಗ್ರಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ನಾಶವಾದಾಗ ₹2,500 ಪರಿಹಾರ ನೀಡುವುದರಿಂದ ರೈತರ ನಷ್ಟ ಭರಿಸಲು ಸಾಧ್ಯವಿಲ್ಲ. ರೈತರು ಎದುರಿಸಿರುವ ವಾಸ್ತವ ನಷ್ಟವನ್ನು ಆಧರಿಸಿ ಪರಿಹಾರ ನಿಗದಿಪಡಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸಾಲಮನ್ನಾ ಸೇರಿದಂತೆ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಜಿ.ಎನ್.ಎಸ್. ಗೌಡ ಆಗ್ರಹಿಸಿದ್ದಾರೆ.